ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಧ್ವನಿ ಮಿಮಿಕ್ರಿ ಮಾಡಿರುವಂತದ್ದು ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಸದನದಲ್ಲಿ ಬಜೆಟ್ ಮಂಡನೆ ಮಾಡಲು ಸರ್ಕಾರಕ್ಕೆ ಸರಿಯಾದ ಸಂಖ್ಯಾಬಲ ಇಲ್ಲ. ಆದ್ದರಿಂದ ಅವರು ಇದನ್ನು ಮರೆಮಾಚಲು ಆಡಿಯೋ ಬಿಡುಗಡೆ ಮಾಡಿದ್ದಾರೆ ಆಷ್ಟೇ. ಬಹುಮತ ಇಲ್ಲದ ಸರ್ಕಾರ ಮಂಡಿಸುವ ಬಜೆಟ್‍ಗೆ ಮನ್ನಣೆ ಇರುವುದಿಲ್ಲ. ಆದರೆ ಬಿಜೆಪಿ ಪಕ್ಷ ಕೋಟಿ ಕೋಟಿ ರೂ. ನೀಡುತ್ತಿದೆ ಎಂದು ಹೇಳಿ ಅವರೇ ತಮ್ಮ ಡಿಮ್ಯಾಂಡ್ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಪ್ರೀಂ ನ್ಯಾಯಾಲಯ ಕೂಡ ಇಂತಹ ಆಡಿಯೋ ನಂಬಿಕೆಗೆ ಅರ್ಹ ಅಲ್ಲ ಎಂದು ಹೇಳಿದೆ. ಇಂದಿನ ತಂತ್ರಜ್ಞಾನದಲ್ಲಿ ಏನನ್ನು ಬೇಕಾದರು ಕೂಡ ಮಾಡಲು ಸಾಧ್ಯವಿದೆ. ಸಮ್ಮಿಶ್ರ ಸರ್ಕಾರದ 2 ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿಗಳೇ ಇಂತಹ ಫೇಕ್ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದರೆ ಎಂತಹ ಸ್ಥಿತಿ ನಿರ್ಮಾಣ ಆಗಿದೆ ಎಂಬುದನ್ನು ತಿಳಿಯಬಹುದು. ಆದರೆ ನಾವು ಯಾರನ್ನೂ ಆಪರೇಷನ್ ಕಮಲ ಅಥವಾ ಕಾಂಗ್ರೆಸ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿಗಳ ಕುರ್ಚಿಗಾಗಿ ಸಿಎಂ ಸ್ಥಾನ ಉಳಿಸಿಕೊಳ್ಳಲು ಇಂತಹ ಕೆಲಸಕ್ಕೆ ಇಳಿದಿದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬಂದ ಶಾಸಕರನ್ನು ಮಾತನಾಡಿದರೆ ತಪ್ಪು ಎಂದರೆ ನಾವು ಏನು ಮಾಡಲು ಸಾಧ್ಯವಿಲ್ಲ. ರಾಜ್ಯದ ಜನತೆಗೆ ಉತ್ತಮ ಕೆಲಸ ಆಗಬೇಕು ಎಂಬ ಉದ್ದೇಶದಿಂದ ನಾವು ಬಜೆಟ್ ಮಂಡನೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ ಕಳೆದ ಬಜೆಟ್ ವೇಳೆ ಸರ್ಕಾರ ನೀಡಿದ ಯೋಜನೆಗಳನ್ನೇ ಇನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಅದೇ ಯೋಜನೆಗಳನ್ನ ಚುನಾವಣೆಯ ದೃಷ್ಠಿಯಿಂದ ಮತ್ತೆ ಆಶ್ವಾಸನೆಗಳನ್ನು ನೀಡುತ್ತಾರಾ ಎಂಬುದರ ಬಗ್ಗೆ ಕಾದು ನೋಡುತ್ತೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv