ಬೆಂಗಳೂರು: ಕಳೆದ ಒಂದು ವರ್ಷದಿಂದ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಗ್ರಾಮವಾಸ್ತವ್ಯ ಎಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂಗೆ ಒಂದು ಕಿವಿಮಾತು ಹೇಳುತ್ತೇನೆ. ಮುಖ್ಯಮಂತ್ರಿಗಳು ಒಂದು ವರ್ಷ ಫೈವ್ ಸ್ಟಾರ್ ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ನಾವು ಎಷ್ಟೇ ಹೇಳಿದರು ಅವರು ಕೇಳಲಿಲ್ಲ. ಒಂದು ವರ್ಷ ವ್ಯರ್ಥ ಆಯ್ತು. ಈಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಒಳಜಗಳ. ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟದಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಸಿಎಂ ಹೆದರಿ ಈಗ ಸ್ವಂತ ಮನೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಆದರೆ ಅವರು ನಿಜಕ್ಕೂ ಮಾಡಬೇಕಾಗಿದ್ದದ್ದು ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಫದಿಸುವಂತೆ ಅಧಿಕಾರಿಗಳಿಗೆ ಚಾಟಿ ಬೀಸಿ ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಕಳಿಸಲಿ. ಖುದ್ದು ಸಿಎಂ ಸಹ ಜಿಲ್ಲೆಗಳಿಗೆ ಭೇಟಿ ಮಾಡಲಿ. ಈ ಕಾರ್ಯವನ್ನು ಮಾಡದೇ ಸಿಎಂ ಕೇವಲ ಗ್ರಾಮ ವಾಸ್ತವ್ಯವನ್ನು ಜನ ಮೆಚ್ಚಲ್ಲ ಎಂದು ತಿಳಿಸಿದರು.
Advertisement
ಜೂನ್ 5 ರ ನಂತರ ಬಿಜೆಪಿ ನಾಯಕರು ಬರಪರಿಶೀಲನೆ ಮಾಡುತ್ತೇವೆ. ಬರಪೀಡಿತ ಜಿಲ್ಲೆಗಳಿಗೆ ನಾವು ಪ್ರವಾಸ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರದ ಮುಂದಿಡುತ್ತೇವೆ ಎಂದರು.
Advertisement
ನನ್ನ ಗ್ರಾಮ ವಾಸ್ತವ್ಯ ಯೋಜನೆಯನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ,22ರಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಪುನರಾರಂಭಿಸುತ್ತಿದ್ದೇನೆ.ಮುಂದಿನ ತಿಂಗಳ ಗ್ರಾಮವಾಸ್ತವ್ಯ ಜುಲೈ5 ಹಾಗೂ 6ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕುಗಳಲ್ಲಿ ಹಮ್ಮಿಕೊಂಡಿದ್ದೇನೆ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 3, 2019
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಒಂದು ವರ್ಷ ಆದ ಮೇಲೆ ಸಿಎಂಗೆ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ಯಾವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಸಿಎಂ ಪ್ರವಾಸ ಮಾಡಲಿ. ಆ ನಂತರ ಅವರು ಗ್ರಾಮವಾಸ್ತವ್ಯವಾದರೂ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.