– ದೇಶ-ವಿದೇಶಗಳ ಸಾವಿರಾರು ಕಲಾವಿದರಿಂದ ಬಣ್ಣ ಬಣ್ಣದ ಕುಂಚ ಪ್ರಪಂಚ ಅನಾವರಣ
ಬೆಂಗಳೂರು: ಬ್ಯುಸಿ ಲೈಫ್ ಓಟದಲ್ಲಿರುವ ಬೆಂಗಳೂರಿಗರಿಗೆ (Bengaluru) ಇಂದು ಕಲಾಚಿತ್ರಗಳು ರಿಲ್ಯಾಕ್ಸ್ ಕೊಟ್ಟಿದ್ವು. ನಗರದಲ್ಲಿ ಇವತ್ತು ಸುಂದರ ಕಲಾ ಪ್ರಪಂಚವೇ ತೆರೆದುಕೊಂಡಿತ್ತು. 23ನೇ ಚಿತ್ರಸಂತೆಗೆ ಭೇಟಿ ಕೊಟ್ಟಿದ್ದ ಲಕ್ಷಾಂತರ ಜನ ಕಲೆಯನ್ನು ಆಸ್ವಾದಿಸಿ ತಮ್ಮ ವೀಕೆಂಡ್ ಅನ್ನೂ ಕಲರ್‌ಫುಲ್ ಮಾಡಿಕೊಂಡ್ರು. ಹಾಗಿದ್ರೆ ಹೇಗಿತ್ತು ಈ ಬಾರಿಯ ಚಿತ್ರಸಂತೆ, ಬನ್ನಿ ನೋಡ್ಕೊಂಡು ಬರೋಣ.
ಕಲೆ ಎಲ್ಲರನ್ನೂ ಸೆಳೆಯುವ ಮಾಧ್ಯಮ. ಕಲಾವಿದನ (Artist) ಕುಂಚದಿಂದ ಅರಳಿದ ಸುಂದರ ಕಲಾಕೃತಿಗೆ ಮಾರು ಹೋಗೋರೇ ಇಲ್ಲ ಅನ್ನಬಹುದು. ಅಂಥ ಕಲಾ ಜಗತ್ತು ಇಂದು ಬೆಂಗಳೂರಿನಲ್ಲಿ ಸೃಷ್ಟಿಯಾಗಿತ್ತು. ಇದನ್ನೂ ಓದಿ: ಜನಾರ್ದನ ರೆಡ್ಡಿ ಇರಾನ್‌ನಿಂದಾದ್ರೂ ಭದ್ರತೆ ತರಿಸಿಕೊಳ್ಳಲಿ, ಅಮೆರಿಕದಿಂದಾದ್ರೂ ತರಿಸಿಕೊಳ್ಳಲಿ: ಡಿಕೆಶಿ ಲೇವಡಿ
ಕರ್ನಾಟಕ ಚಿತ್ರಕಲಾ ಪರಿಷತ್‌ನಿಂದ ಬೆಂಗಳೂರಿನಲ್ಲಿ ಇಂದು 23ನೇ ಚಿತ್ರಸಂತೆ ಹಮ್ಮಿಕೊಳ್ಳಲಾಗಿತ್ತು. ವಿಂಡ್ಸರ್ ಮ್ಯಾನರ್ ರಸ್ತೆಯಿಂದ ಶಿವಾನಂದ ಬ್ರಿಡ್ಜ್‌ವರೆಗೂ ಬಣ್ಣಬಣ್ಣದ ಲೋಕ ತೆರೆದುಕೊಂಡಿತ್ತು. ಬೆಳಗ್ಗೆ 8 ಗಂಟೆಗೇ ಚಿತ್ರಸಂತೆ ಆರಂಭವಾಗಿತ್ತು. ಬೆಳಗ್ಗೆ 11 ಕ್ಕೆ ಸಿಎಂ ಸಿದ್ದರಾಮಯ್ಯ ಚಿತ್ರಸಂತೆ ಉದ್ಘಾಟಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಎಸ್ಪಿ ಪವನ್ ನೆಜ್ಜೂರ್ ಡೆತ್‌ನೋಟ್ ಮುಚ್ಚಿಟ್ಟಿದೆ: ಶೋಭಾ ಕರಂದ್ಲಾಜೆ ಬಾಂಬ್
ಈ ವೇಳೆ ಮಾತಾಡಿದ ಸಿಎಂ, ಅತ್ಯಂತ ಸಂತೋಷದಿದ 23ನೇ ಚಿತ್ರಸಂತೆ ಉದ್ಘಾಟನೆ ಮಾಡಿದ್ದೇನೆ. ನಾನು 8ನೇ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ. ಕಲಾವಿದರನ್ನ ಪ್ರೋತ್ಸಾಹಿಸುವಂತಹ, ಅವರು ರಚಿಸಿದ ಚಿತ್ರಗಳ ಪ್ರದರ್ಶನ ಹಾಗೂ ಮಾರಾಟ ಮಾಡುವ ವೇದಿಕೆಯನ್ನು ಚಿತ್ರಕಲಾ ಪರಿಷತ್ ಅನೇಕ ವರ್ಷದಿಂದ ಮಾಡುತ್ತಾ ಬರ್ತಿದೆ. 2003ರಲ್ಲಿ ಆರಂಭವಾಗಿ ಇದೀಗ 23 ನೇ ಚಿತ್ರಸಂತೆಯಾಗಿದೆ. ಕಲಾವಿದರು, ಜನರು ಸೇರುವ ಒಂದು ವೇದಿಕೆ ಬೇಕಾಗುತ್ತೆ. ಅದನ್ನ ಚಿತ್ರಕಲಾ ಪರಿಷತ್ ಮಾಡ್ತಾ ಇದೆ. ಅದಕ್ಕೆ ಸಹಾಯ ನಾವು ಮಾಡುತ್ತಾ ಬಂದಿದ್ದೇವೆ. ಮುಂದೇನೂ ಆ ಸಹಾಯವನ್ನು ನಾವು ಮಾಡ್ತೇವೆ ಅಂದ್ರು.
ಇನ್ನು ಈ ಬಾರಿ ಒಂದೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ರು. ಕಲಾವಿದರ ಕಲಾ ಪ್ರತಿಭೆಯ ಅನಾವರಣ ಹಾಗೂ ಕಲಾಕೃತಿಗಳ ಮಾರಾಟಕ್ಕೆ ವೇದಿಕೆಯಾಗಿರುವ ಈ ಚಿತ್ರಸಂತೆಯನ್ನು ಈ ಸಲ ಪರಿಸರಕ್ಕೆ ಸಮರ್ಪಿಸಲಾಗಿತ್ತು. ಚಿತ್ರಸಂತೆಯಲ್ಲಿ ರಾಜ್ಯ, ಪರರಾಜ್ಯ, ವಿದೇಶಗಳ ಹೆಸರಾಂತ ಕಲಾವಿದರು ಭಾಗವಹಿಸಿ ತಮ್ಮ ಕುಂಚ ಪ್ರಪಂಚದ ದರ್ಶನ ಮಾಡಿಸಿದ್ರು. ಬೆಳಗ್ಗಿನಿಂದಲೇ ಲಕ್ಷಾಂತರ ಕಲಾಸಕ್ತರು ಚಿತ್ರಸಂತೆಗೆ ಬಂದು ಕಲೆ ಆಸ್ವಾದಿಸಿದ್ರು. ನೆಚ್ಚಿನ ಕಲಾಕೃತಿಗಳನ್ನ ಖರೀದಿಸಿದ್ರು. ರಾಜ್ಯದ ಕಲಾವಿದರಿಗೆ ಶೇ.50ರಷ್ಟು ಮೀಸಲು ನೀಡಲಾಗಿತ್ತು. ಉಳಿದಂತೆ ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್, ಲಕ್ಷ ದ್ವೀಪ, ಅಸ್ಸಾಂ ಸೇರಿದಂತೆ ನಾನಾ ರಾಜ್ಯಗಳಿಂದಲೂ ಕಲಾವಿದರು ಆಗಮಿಸಿದ್ರು.
ಕಲಾಕೃತಿಗಳ ಮಾರಾಟದ ಭರಾಟೆಯೂ ಹೆಚ್ಚಾಗಿತ್ತು. ಈ ಬಾರಿ 3 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎನ್ನಲಾಗಿದೆ. ಕನಿಷ್ಟ 100 ರೂ. ಯಿಂದ ಲಕ್ಷಾಂತರ ರೂ. ಮೌಲ್ಯದ ಕಲಾಕೃತಿಗಳು ಚಿತ್ರಸಂತೆಯಲ್ಲಿ ಮಾರಾಟಕ್ಕಿಡಲಾಗಿತ್ತು. ಈ ಬಾರಿ ಚಿತ್ರಸಂತೆಗೆ 5 ಲಕ್ಷ ಜನ ಭೇಟಿ ಕೊಟ್ಟಿರುವ ನಿರೀಕ್ಷೆ ಇದೆ. ಚಿತ್ರಸಂತೆಯಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನೂ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಬೆಂಗಳೂರು| ರೋಡ್ ಸೈಡ್ ಪಾರ್ಕಿಂಗ್‌ಗೆ ಕಟ್ಟಬೇಕು ಕಾಸು – ಜಿಬಿಎ ಪೇ & ಪಾರ್ಕಿಂಗ್ ರೂಲ್ಸ್ ಶೀಘ್ರ ಜಾರಿ?



