ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ `ಕಾವೇರಿ’ ಜಟಾಪಟಿ ಮುಂದುವರಿದಿದ್ದು, ಇದೀಗ ಅಧಿಕಾರಿಗಳು ಸಿದ್ದರಾಮಯ್ಯನವರ ಕಾವೇರಿ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.
Advertisement
ಈ ಮೂಲಕ ಸರ್ಕಾರ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿದ್ದು, ಈ ಹಿಂದೆ ಮನೆ ಖಾಲಿ ಮಾಡುವಂತೆ ಸಿದ್ದರಾಮಯ್ಯನವರಿಗೆ ತಿಳಿಸಲಾಗಿತ್ತು. ಆದರೆ ತುಂಬಾ ದಿನಗಳಿಂದ ಅದೇ ಮನೆಯಲ್ಲಿ ಇರುವುದರಿಂದ ಸಿದ್ದರಾಮಯ್ಯನವರು ಖಾಲಿ ಮಾಡಿರಲಿಲ್ಲ. ಇನ್ನೂ ನಿವಾಸ ಖಾಲಿ ಮಾಡದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.
Advertisement
ಡಿಪಿಎಆರ್ ಸಿಬ್ಬಂದಿಯಿಂದ ಸಿದ್ದು ನಿವಾಸದ ಬೋರ್ಡ್ ತೆರವುಗೊಳಿಸಲಾಗಿದ್ದು, ಈ ಮೂಲಕ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಮತ್ತೆ ಸೂಚನೆ ನೀಡಿದ್ದಾರೆ. ಅಲ್ಲದೆ ಇನ್ನೂ ಮೂರ್ನಾಲ್ಕು ದಿನಗಳೊಳಗೆ ಕಾವೇರಿ ನಿವಾಸ ಬಿಟ್ಟುಕೊಡುವಂತೆ ಸೂಚಿಸಿದ್ದಾರೆ. ಕಾವೇರಿಯಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದು, ಹೀಗಾಗಿ ನಿವಾಸವನ್ನು ಬಿಟ್ಟುಕೊಡುವಂತೆ ತಿಳಿಸಿದ್ದಾರೆ.
Advertisement
Advertisement
ಮೂರ್ನಾಲ್ಕು ದಿನಗಳಲ್ಲಿ ನಿವಾಸ ಖಾಲಿ ಮಾಡದಿದ್ದಲ್ಲಿ ನೀರಿನ ಸಂಪರ್ಕವನ್ನು ಸಹ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮನೆ ಖಾಲಿ ಮಾಡುತ್ತಾರಾ ಅಥವಾ ಸಿಎಂಗೆ ಸೆಡ್ಡು ಹೊಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇತ್ತ ಕಾವೇರಿ ನಿವಾಸವನ್ನು ಖಾಲಿ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ವಿಪಕ್ಷ ನಾಯಕನಾದ ನಂತರ ಕಾವೇರಿ ನಿವಾಸದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಆ ಮನೆ ಮಹತ್ವದ ಪಾತ್ರ ವಹಿಸಿದೆ. ಈಗ ಪುನಃ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದೆ. ಆದ್ದರಿಂದ ಕಾವೇರಿ ನಿವಾಸದಲ್ಲೇ ಮುಂದುವರಿದರೆ ಮತ್ತಷ್ಟು ರಾಜಕೀಯ ಉನ್ನತಿ ಸಿಗಬಹುದು ಎಂಬುದು ಸಿದ್ದರಾಮಯ್ಯ ಪತ್ನಿಯ ನಂಬಿಕೆ ಎಂದು ಹೇಳಲಾಗಿತ್ತು.
ಕಾವೇರಿ ಪಕ್ಕದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಇರುವುದರಿಂದ ಕಾವೇರಿಯಲ್ಲಿ ಸಿಎಂ ಇದ್ದರೆ ಓಡಾಟ ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕಾವೇರಿ ನಿವಾಸವನ್ನು ಸಿಎಂಗೆ ನೀಡಲಾಗಿದೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯಗೆ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ನೀಡಲಾಗಿದೆ. ಆದರೆ ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲೇ ಇರುವ ಸಿದ್ದರಾಮಯ್ಯ ಮಾತ್ರ ಕಾವೇರಿ ನಿವಾಸದಲ್ಲೇ ಮುಂದುವರಿಯುವ ಕಸರತ್ತು ಮುಂದುವರಿಸಿದ್ದರಿಂದ ಇಂದು ಅಧಿಕಾರಿಗಳು ಬೋರ್ಡ್ ಕಿತ್ತು ಹಾಕಿದ್ದಾರೆ.