– ಬಾಯಿಗೆ ಬಂದಂತೆ ಹೇಳಿಕೆ ನೀಡೋದು ಸರಿಯಲ್ಲ
– ಎಚ್‍ಡಿಕೆ ದೊಡ್ಡತನ ಮೆರೆದಿದ್ದಾರೆ
ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಇರುತ್ತಾರೆ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಿಎಂ, ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರು ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ. ಸರ್ಕಾರ ಸತ್ತು ಹೋಗಿದೆ. ಮೂರು ತಿಂಗಳಾದರೂ ಪರಿಹಾರ ನೀಡಿಲ್ಲ ಅಂತ ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ಪಡೆದಿದ್ದೇನೆ. 10 ಸಾವಿರ ರೂ.ನಂತೆ 1.12 ಲಕ್ಷ ಸಂತ್ರಸ್ತರಿಗೆ ನೀಡಲಾಗಿದೆ. ಪ್ರವಾಹದಿಂದ ಮನೆ ಕಳೆದುಕೊಂಡ 14 ಸಾವಿರ ಸಂತ್ರಸ್ತರಿಗೆ ತಲಾ ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿದ್ದೇವೆ ಎಂದು ತಿಳಿಸಿದರು.
Advertisement
ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ಪಡೆಯಬಹುದಿತ್ತು. ಅಂಕಿ-ಅಂಶಗಳನ್ನು ತಿಳಿದುಕೊಳ್ಳದೆ ಹುಚ್ಚುಚ್ಚಾಗಿ ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ. ಇದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ. ನಾನು ನೀಡಿದ ಅಂಕಿ-ಅಂಶದಲ್ಲಿ ವ್ಯತ್ಯಾಸವಿದ್ದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಗುಡುಗಿದರು. ಇದನ್ನೂ ಓದಿ: ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ
Advertisement
Advertisement
ಜೆಡಿಎಸ್‍ನ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಎಸ್‍ವೈ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷ ಕಟ್ಟುವುದು, ಬೆಳೆಸುವುದು ಗೊತ್ತಿದೆ. ಈ ತರಹದ ಹೇಳಿಕೆಯನ್ನು ನೀಡುವುದನ್ನು ಬಿಟ್ಟು ಕಾಂಗ್ರೆಸ್ ಉಳಿಸಿಕೊಳ್ಳಲಿ. ಅವರ ಶಾಸಕರೇ ಗೊಂದಲದಲ್ಲಿದ್ದಾರೆ, ನಾಯಕರಿಲ್ಲದೆ ಕಿತ್ತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
Advertisement
ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಫಲಿತಾಂಶ ಬರುವವರೆಗೆ ಕಾದು ನೋಡಲಿ. ಬೆಂಬಲ ನೀಡುವಂತೆ ಜೆಡಿಎಸ್‍ಗೆ ಕೇಳುವ ಪ್ರಶ್ನೆಯೇ ಉದ್ಭವಿಸಲ್ಲ. ಉಪ ಚುನಾವಣೆ ಬಳಿಕವೂ ಸರ್ಕಾರ ಸುಭದ್ರವಾಗಿರುತ್ತದೆ. ಈ ಮೂಲಕ ಸಿದ್ದರಾಮಯ್ಯನವರು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಉಳಿಯುತ್ತಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರು ಪ್ರಚಾರಕ್ಕಾಗಿ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಅವರು ನೀಡಿದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಹೀಗಾಗಿ ಸರ್ಕಾರ ಬೀಳಿಸುವ ಯಾವುದೇ ಯತ್ನಕ್ಕೆ ಕೈ ಹಾಕಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ದೊಡ್ಡತನ ಮೆರೆದಿದ್ದಾರೆ. ಅದನ್ನು ಅಪಾರ್ಥ ಮಾಡಿಕೊಳ್ಳುವುದು ಸರಿಲ್ಲ ಎಂದು ಹೇಳಿದರು.