ಬೆಂಗಳೂರು: ಅತೃಪ್ತ ಶಾಸಕರೆಲ್ಲ ಸದ್ಯ ಅನರ್ಹಗೊಂಡಿದ್ದಾರೆ. ಶಾಸಕರ ಅನರ್ಹತೆಯ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ರಚನೆಯ ಲೆಕ್ಕಾಚಾರವನ್ನು ಬದಲಿಸಿಕೊಂಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ರಾಜೀನಾಮೆ ನೀಡುವ ಮೊದಲು ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಹೇಳಿತ್ತು ಎನ್ನಲಾಗುತ್ತಿದೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗಿದ್ದರೆ ಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋಗುವ ಪ್ಲಾನ್ ಬಿಜೆಪಿಗಿತ್ತು. ಆದರೆ ಈಗ ಶಾಸಕರನ್ನು ಅನರ್ಹ ಮಾಡಿದ್ದರಿಂದ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ.
ಈಗ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಅನರ್ಹತೆಯನ್ನು ರದ್ದುಗೊಳಿಸುವ ಆದೇಶ ಸುಪ್ರೀಂನಿಂದ ಪ್ರಕಟವಾದರೆ ಮಾತ್ರ ಅವರೆಲ್ಲರಿಗೂ ಸಂಪುಟದಲ್ಲಿ ಸ್ಥಾನ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆ. ಹೀಗಾಗಿ ತನ್ನ ಸಂಪುಟದಲ್ಲಿ ಈಗ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲಾವಾರು/ ಜಾತಿವಾರು ಪ್ರತಿನಿಧ್ಯ ನೀಡಬೇಕಾದ ಕಾರಣ ಬಿಎಸ್‍ವೈ ಅಳೆದು ತೂಗಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾನು ಗುರುತಿಸಿದವರೇ, ನನಗೆ ಮೋಸ ಮಾಡಿದರು – ಸುದ್ದಿಗೋಷ್ಠಿಯಲ್ಲಿ ಎಚ್‍ಡಿಡಿ ಕಣ್ಣೀರು
ಮುಂಜಾಗ್ರತಾ ಕ್ರಮಗಳೇನು?
ಕಾನೂನು ಪ್ರಕಾರ ಸಿಎಂ ಸೇರಿ ಗರಿಷ್ಟ ಒಟ್ಟು 34 ಮಂದಿಗಷ್ಟೇ ಮಂತ್ರಿಯಾಗಲು ಸಾಧ್ಯ. ಸದ್ಯ ಅನರ್ಹಗೊಂಡಿರುವ ಶಾಸಕರನ್ನು ಹೊರತುಪಡಿಸಿ ಕೇವಲ 23 ಶಾಸಕರನ್ನು ಒಳಗೊಂಡ ಸಚಿವ ಸಂಪುಟ ರಚನೆ ಮಾಡುವುದು. 11 ಮಂತ್ರಿ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, 6 ತಿಂಗಳ ಬಳಿಕ ಸಂಪುಟ ವಿಸ್ತರಣೆಗೆ ಮುಂದಾಗುವುದು. ಆ ಸಮಯದಲ್ಲಿ ರೆಬೆಲ್ ಶಾಸಕರು ಅನರ್ಹತೆಯಿಂದ ಪಾರಾಗಿದ್ದರೆ, ಅವರಲ್ಲಿ 11 ನಾಯಕರು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಹಾಗಾಗಿ ಕಾದು ನೋಡುವ ತಂತ್ರಕ್ಕೆ ಯಡಿಯೂರಪ್ಪನವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸುತ್ತೆ: ಚಲುವರಾಯಸ್ವಾಮಿ
ಕಾದು ನೋಡುವ ತಂತ್ರ ಸೇರಿದಂತೆ ಸಂಪುಟ ರಚನೆಯ ನಾಲ್ಕೈದು ಅಂಶಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಅಮಿತ್ ಶಾ ಮುಂದೆ ಇಡಲು ಯಡಿಯೂರಪ್ಪನವರು ತೀರ್ಮಾನಿಸಿದ್ದಾರೆ. ಅಮಿತ್ ಶಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ರಾಜ್ಯ ಬಿಜೆಪಿಯ ಸಂಪುಟ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!
ಅನರ್ಹಗೊಂಡಿರುವ ಎಲ್ಲ 17 ಶಾಸಕರಿಗೂ 15ನೇ ವಿಧಾನಸಭೆಯ ಬಾಗಿಲು ಬಂದ್ ಆಗಿದೆ. ವಿಶ್ವಾಸಮತ ಯಾಚನೆ ವೇಳೆ ಗೈರಾಗಿದ್ದರಿಂದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದೀಗ ಬಿಜೆಪಿ ನೇತೃತ್ವದ ಸರ್ಕಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದು, ಅತೃಪ್ತರೆಲ್ಲರಿಗೂ ಸಚಿವ ಸ್ಥಾನ ಸೇರಿದಂತೆ ಹಲವು ಭರವಸೆಗಳನ್ನು ಕಮಲ ನಾಯಕರು ನೀಡಿದ್ದರು ಎನ್ನಲಾಗಿತ್ತು. ಅನರ್ಹಗೊಂಡಿರುವ ಎಲ್ಲ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿಕೊಂಡೇ ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ
ಅನರ್ಹಗೊಂಡ ಶಾಸಕರು:
ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಕಾಂಗ್ರೆಸ್ಸಿನ ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರನ್ನು ಅನರ್ಹಗೊಳಿಸಿದ್ದಾರೆ. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ