ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅನರ್ಹ ಶಾಸಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಭಯ ನೀಡಿದ್ದು, ಎಲ್ಲಾ 14 ಅನರ್ಹ ಶಾಸಕರು ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಸ್ವತಃ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಸೋಮವಾರದಿಂದ ಆರಂಭ ಮಾಡಲಿರುವ ಸಿಎಂ ಬಿಎಸ್‍ವೈ, ಮೊದಲು ಅನರ್ಹ ಶಾಸಕ ಎಂಟಿಬಿ ನಾಗರಾಜ್‍ರ ಹೊಸಕೋಟೆಯಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅಲ್ಲದೇ ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 1 ದಿನ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಅನರ್ಹ ಶಾಸಕರಿಗೆ ನೀಡಿರೋ ಭರವಸೆಯಂತೆ ಸಿಎಂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಅನರ್ಹರನ್ನು ಮತ್ತೆ ಶಾಸಕರನ್ನು ಮಾಡುತ್ತೇನೆ ಎಂಬ ಶಪಥವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲ್ಲೆಯಲ್ಲಿ 14 ಕ್ಷೇತ್ರಗಳಿಗೆ ಸಿಎಂ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ಸಿದ್ಧವಾಗಿದೆ.
ಸಿಎಂ ಬಿಎಸ್‍ವೈ ಅವರು ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಮುಖಂಡರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಸಿಎಂ ಅವರೇ ಪ್ರಚಾರ ಕಾರ್ಯಕ್ಕೆ ಆಗಮಿಸುವುದರಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಶಮನವಾಗುತ್ತದೆ ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.