ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದು 2 ತಿಂಗಳೇ ಕಳೆದಿದೆ. ಆದರೂ ಕೇಂದ್ರದಿಂದ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕೆ ಹಣವಿಲ್ಲ ಅಂತ ಒಪ್ಪಿಕೊಂಡಿದ್ದಾರೆ.
ಚಿತ್ರದುರ್ಗದ ಸಿರಿಗೆರೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಮುಖ್ಯಮಂತ್ರಿ ಆದಾಗಲೆಲ್ಲ ಒಂದು ರೀತಿ ಅಗ್ನಿ ಪರೀಕ್ಷೆ ನಡೆಯುತ್ತದೆ. ಕಳೆದ 100 ವರ್ಷಗಳಿಂದ ಆಗದಂತಹ ಪ್ರವಾಹ ಈ ಬಾರಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದ್ದು, ಅದಕ್ಕೆ ಸ್ಪಂದಿಸುತ್ತಿದ್ದೇವೆ. ನಾವು ಸರ್ಕಾರ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡನ್ನೂ ಎದುರಿಸುತ್ತಿದ್ದೇವೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
Advertisement
Advertisement
ಕೇಂದ್ರ ಸರ್ಕಾರವು ಮುಂದಿನ ನಾಲ್ಕೈದು ದಿನಗಳಲ್ಲಿ ನೆರೆ ಪರಿಹಾರ ಹಣವನ್ನು ನೀಡುತ್ತದೆ ಎನ್ನುವ ಭರವಸೆ ಇದೆ. ರಾಜ್ಯ ಸರ್ಕಾರದ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಚಿಂತನೆ ನಡೆದಿದೆ. ಈ ಹಿಂದೆಂದೂ ನೀಡದಷ್ಟು ಹಣವನ್ನು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ನೀಡಲಾಗುತ್ತದೆ. ಒಟ್ಟು 5 ಲಕ್ಷ ರೂ. ಪೈಕಿ ಈಗಾಗಲೇ 1 ಲಕ್ಷ ರೂ.ಯನ್ನು ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ತಿಳಿಸಿದರು.
Advertisement
ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ರಸ್ತೆ, ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಯಾವ ಇಲಾಖೆಯಲ್ಲಿ ಹಣ ಖರ್ಚು ಆಗದೆ ಉಳಿದಿದೆ ಎಂದು ಮಾಹಿತಿ ಕಲೆ ಹಾಕಿದ್ದೇವೆ. ಆ ಹಣವನ್ನು ಈಗ ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ ಹಿಂದಿನ ಮೈತ್ರಿ ಸರ್ಕಾರ ರೈತರ ಕೃಷಿ ಸಾಲಮನ್ನಾ ಮಾಡಿತ್ತು. ಆ ಹಣವನ್ನೂ ಕೂಡ ಹಂತ ಹಂತವಾಗಿ ಬ್ಯಾಂಕ್‍ಗಳಿಗೆ ಪಾವತಿಸುತ್ತೇವೆ ಎಂದು ತಿಳಿಸಿದರು.