ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಬಿಎಸ್‍ವೈ

Public TV
3 Min Read
BSY PM Modi

– ಸಂಪುಟ ರಚನೆ ಮತ್ತೆ ಮುಂದೂಡಿಕೆ

ನವದೆಹಲಿ: ಸಂಪುಟ ರಚನೆ ಸಂಬಂಧ ಬಿಜೆಪಿ ಹೈಕಮಾಂಡ್ ಭೇಟಿಗೆ ತೆರಳಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ದೆಹಲಿಗೆ ತೆರಳಿ, ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಆಸ್ಪತ್ರೆ ನೀಡಬೇಕು. ಕೃಷ್ಣಾ, ಮಹಾದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಬೇಕು, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

BSY D

ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ನಿತಿನ್ ಗಡ್ಕರಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಸಂಸತ್‍ನಲ್ಲಿ ಭೇಟಿಯಾದರು. ನರೇಂದ್ರ ಸಿಂಗ್ ತೋಮರ್ ಅವರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನೋಂದಣಿ ಅವಧಿಯನ್ನು ಆಗಸ್ಟ್ 14ರ ವರೆಗೆ ವಿಸ್ತರಿಸುವಂತೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ 2019-20ರ ಅನುದಾನ ಬಿಡುಗಡೆ ಹಾಗೂ ರಾಜ್ಯ ಸರ್ಕಾರವು 2015-16, 2016-17 ಮತ್ತು 2019-20ರಲ್ಲಿ ಪಾವತಿಸಿರುವ ಮುಂಗಡ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ನಗರಕ್ಕೆ ರಿಂಗ್ ರೋಡ್, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದ ಹಲವೆಡೆ ಹೆದ್ದಾರಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬಿಎಸ್ ಯಡಿಯೂರಪ್ಪ ಅವರು ಮನವಿ ಸಲ್ಲಿಸಿದ್ದಾರೆ. ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸೌಜನ್ಯಯುತ ಭೇಟಿ ಮಾಡಿದ್ದಾರೆ.

ದೆಹಲಿಯಲ್ಲಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಇಂದು ರಾಜ್ಯ ಸಂಸದರ ಜೊತೆ ಸಭೆ ನಡೆಸಿದ್ದರು. ದೆಹಲಿ ಕರ್ನಾಟಕ ಭವನದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಕಾರ್ಯಗಳ ಸಂಬಂಧ ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಸೇರಿದಂತೆ ರಾಜ್ಯ ಬಿಜೆಪಿಯ ಎಲ್ಲಾ ಸಂಸದರು ಹಾಜರಾಗಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್‍ನಿಂದ ಡಿ.ಕೆ.ಸುರೇಶ್, ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ, ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಮತ್ತು ಸಂಸತ್‍ನಲ್ಲಿ ಒಗ್ಗಟ್ಟಾಗಿ ಇರಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಸಭೆಯಲ್ಲಿ ಕೃಷ್ಣಾ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಒಗ್ಗಟ್ಟಿನಿಂದ ಧ್ವನಿ ಎತ್ತಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.

BSY A

ಸಂಪುಟ ರಚನೆ ಸಂಬಂಧ ಸಾಕಷ್ಟು ನಿರೀಕ್ಷೆ ಹೊತ್ತು ದೆಹಲಿಗೆ ತೆರಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಇಂದು ನಿರಾಸೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾದರೂ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಯಲಿಲ್ಲ. ಲೋಕಸಭೆ ಕಲಾಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿ ಆಗಿದ್ದ ಹಿನ್ನೆಲೆ ಬುಧವಾರ ಚರ್ಚೆ ನಡೆಸೋಣ ಎಂದು ಕಾರ್ಯಧ್ಯಕ್ಷ ಜೆ.ಪಿ ನಡ್ಡ ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬಿ.ಎಸ್.ಯಡಿಯೂರಪ್ಪನವರು ಇಂದು ಬೆಳಗ್ಗೆ ಸಂಸತ್‍ನಲ್ಲಿ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ರಚನೆ ಸಂಬಂಧ ಪ್ರಸ್ತಾವಣೆ ಸಲ್ಲಿಸಿದರು. ಆದರೆ ಕಾಶ್ಮೀರ ವಿಚಾರ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದು ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಾಕಷ್ಟು ಬ್ಯುಸಿಯಾಗಿದ್ದಾರೆ. ಇಂದು ಸಭೆ ನಡೆಸಿದರು ಅದು ಪೂರ್ಣವಾಗದು ಎಂದು ನಡ್ಡಾ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಇಂದಿನ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ ನಾಳೆಗೆ ಅಮಿತ್ ಶಾ ಸಮ್ಮುಖದಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೊಣ ಎಂದು ನಡ್ಡ ಭರವಸೆ ನೀಡಿದ್ದಾರಂತೆ. ಹಾಗಾಗಿ ಸಂಪುಟ ರಚನೆ ಕನಸು ಕಂಡಿದ್ದ ಬಿಎಸ್‍ವೈ ಅವರು ಇನ್ನೊಂದು ದಿನ ಕಾಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *