ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬರ್ತೀರಾ: ಡಿಸಿಗೆ ಬಿಎಸ್‍ವೈ ಕ್ಲಾಸ್

Public TV
2 Min Read
BSY 1

– ಅಧಿಕಾರಿಗಳ ಸಮ್ಮುಖದಲ್ಲಿ ಡಿಸಿಯನ್ನ ಜಾಡಿಸಿದ ಸಿಎಂ

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯನ್ನು ಜಾಡಿಸಿದ ಪ್ರಸಂಗ ಇಂದು ನಗರದಲ್ಲಿ ನಡೆದಿದೆ.

ಪ್ರವಾಹದ ವೇಳೆ ಎಷ್ಟು ಹಳ್ಳಿಗಳಿಗೆ ನದಿ ನೀರು ನುಗ್ಗಿತ್ತು? ಜಿಲ್ಲೆಯ ಎಷ್ಟು ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ, ಡಿಸಿ ಕರ್ಮರಾವ್ ಅವರನ್ನು ಪ್ರಶ್ನಿಸಿದರು. ಆಗ ಕರ್ಮರಾವ್, ಮೂರು ಸಾವಿರದಿಂದ ಮೂರುವರೆ ಸಾವಿರ ಮನೆಗಳ ಸ್ಥಳಾಂತರ ಆಗಬೇಕು ಎಂದು ಉತ್ತರಿಸಿದರು. ಆದರೆ ಜಿಲ್ಲಾಧಿಕಾರಿಗಳಿಂದ ಸಮಂಜಸ ಉತ್ತರ ಬರಲಿಲ್ಲವೆಂದು ಸಿಎಂ ಕಿಡಿಕಾರಿದರು.

BSY A

ಸರಿಯಾದ ಮಾಹಿತಿ ಕೊಡ್ರಿ. ಮೂರು ಸಾವಿರ ಕುಟುಂಬಗಳು ಅಂದ್ರೆ ಪ್ರತಿ ಕುಟುಂಬಕ್ಕೂ ಐದು ಲಕ್ಷ ರೂಪಾಯಿ ಕೊಡಬೇಕಾಗುತ್ತದೆ. ಗೊತ್ತೇನ್ರಿ ನಿಮಗೆ… ಹೇಳಿದ್ದು ಕೇಳಿಸ್ತಾ ಎಂದು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಮಧ್ಯ ಪ್ರವೇಶಿಸಿದ ಅಧಿಕಾರಿಯೊಬ್ಬರು, ಜಿಲ್ಲೆಯ ಕನಿಷ್ಠ 2,500 ಮನೆಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಅಲ್ಲಿನ ಜನರು ಮನೆಗಳನ್ನು ಸ್ಥಳಾಂತರಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ಮರಾವ್ ಅವರತ್ತ ನೋಡಿದ ಸಿಎಂ, ಜಿಲ್ಲಾಧಿಕಾರಿ ನೀವಾ? ಅಥವಾ ಅವ್ರಾ? ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಸಂಪೂರ್ಣ ಮಾಹಿತಿ ಹೊಂದಿರಬೇಕು. ಸಂತ್ರಸ್ತರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳು ಎಷ್ಟು ಇವೆ. ನೆರೆಯಿಂದಾಗಿ ಬಿದ್ದ ಮನೆಗಳನ್ನು ಎ, ಬಿ, ಸಿ ಅಂತ ವಿಭಾಗ ಮಾಡಬೇಕು. ಇದೆಲ್ಲ ಗೊತ್ತಿಲ್ವಾ ಎಂದು ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡರು.

ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಧೋಳದಲ್ಲಿ ಶುಕ್ರವಾರ ರೈತರ ವಿರುದ್ಧ ಗರಂ ಆಗಿದ್ದರು. ಇದರ ಬೆನ್ನಲ್ಲೇ ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧವೂ ಸಿಡಿಮಿಡಿಗೊಂಡಿದ್ದರು.

ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಂದ ಸಿಎಂ ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದ ಸಂತ್ರಸ್ತರಿಗೆ ಹಣ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಉತ್ತರಕ್ಕೆ ಅಸಮಾಧಾನಗೊಂಡ ಸಿಎಂ, ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನರಿಗೆ ಯಾವುದೋ ಒಂದು ಅವಕಾಶದ ಅಡಿ ಪರಿಹಾರ ನೀಡಬೇಕು. ನಿಮ್ಮ ಕಾಯ್ದೆ ತೆಗೆದುಕೊಂಡು ಬೆಂಕಿಗೆ ಹಾಕಿ. ಈಗ ಸಂತ್ರಸ್ತರ ಹಿತವೇ ಮುಖ್ಯ. ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿದ್ದರೂ ಯಾವುದಾದರೊಂದು ಮಾರ್ಗ ಹುಡುಕಿ ಪರಿಹಾರ ಕೊಡಿ ಎಂದು ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *