ಬೆಂಗಳೂರು: ಗುರುವಾರ ನಡೆದ ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೈದ್ದಾಂತಿಕ ಭಿನ್ನಾಭಿಪ್ರಾಯ ಮರೆತು ಭಾಗವಹಿಸಿದ್ದರು. ಆದರೆ ಇದು ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ವಿಶ್ವಾಸ ಎನ್ನುವುದಕ್ಕಿಂತ ತಮ್ಮ ಪಾಲಿನ ಕಳಂಕ ದೂರವಾಗಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾದರು ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ.
ಪ್ರತ್ಯೇಕ ಧರ್ಮದ ವಿವಾದಕ್ಕೆ ಕೈ ಹಾಕಿದ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ಕಾರಣಕ್ಕೆ ಮತ್ತೊಮ್ಮೆ ಸಿಎಂ ಆಗುವ ಸಿದ್ದರಾಮಯ್ಯ ಕನಸು ನುಚ್ಚು ನೂರಾಗಿತ್ತು. ಆದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕಾದರೆ ಲಿಂಗಾಯತ ಸಮುದಾಯದ ಬೆಂಬಲ ಅನಿವಾರ್ಯ ಎಂಬುದನ್ನ ಅರಿತ ಸಿದ್ದರಾಮಯ್ಯ, ಯಡಿಯೂರಪ್ಪ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಲಿಂಗಾಯತ ಸಮುದಾಯದ ಮನಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಸೈದ್ದಾಂತಿಕ ಭಿನ್ನಾಭಿಪ್ರಾಯ, ರಾಜಕೀಯ ವಿರೋಧದ ನಡುವೆಯು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದರು ಅನ್ನೋದು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸಹಾಯವಾಗಬಹುದು ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ. ಜೊತೆಗೆ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ತಮಗೂ ತಮ್ಮ ಪುತ್ರನಿಗು ಸಹಾಯವಾಗಬಹುದು ಅನ್ನೋ ಲೆಕ್ಕಾಚಾರ ಸಿದ್ದರಾಮಯ್ಯರದು ಎನ್ನಲಾಗುತ್ತಿದೆ. ಹೀಗೆ ಪ್ರತ್ಯೇಕ ಧರ್ಮದ ವಿವಾದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ ಸಿದ್ದರಾಮಯ್ಯ ಅದನ್ನ ಸರಿಪಡಿಸಿಕೊಂಡು ಲಿಂಗಾಯತ ಸಮುದಾಯದ ಮನಸ್ಸು ಗೆಲ್ಲಲು ಯಡಿಯೂರಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಅನ್ನೋ ಮಾತು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.