ಚಿಕ್ಕಮಗಳೂರು: ಪೂಜ್ಯರು ಕೇವಲ ಮಠವನ್ನು ಮಾತ್ರ ಕಟ್ಟದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜನರ ಮನಸ್ಸನ್ನು ಕಟ್ಟುತ್ತಿದ್ದಾರೆ. ನಾನು ಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶೃಂಗೇರಿ ಶಾರದಾಂಬೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನು ಮುನ್ನಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಜಿಲ್ಲೆಯ ಶೃಂಗೇರಿ ಶಾರದಾಂಬೆ ಹಾಗೂ ಕೊಪ್ಪ ತಾಲೂಕಿನ ಐತಿಹಾಸಿಕ ಹರಿಹರಪುರ ಮಠಕ್ಕೆ ಭೇಟಿ ನೀಡಿದ ಸಿಎಂ, ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ
ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು. ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ ಭಕ್ತಿ ಹಾಗೂ ಪವಿತ್ರ. ನಾವು ದೇವರ ಬಳಿ ಅಂತಸ್ತು, ಐಶ್ವರ್ಯ ಕೇಳುತ್ತೇವೆ. ಸ್ವಾಮೀಜಿಗಳು ಲೋಕಕ್ಕಾಗಿ ಕೇಳಿ ಕೊಳ್ಳುತ್ತಾರೆ. ನಿಸ್ವಾರ್ಥ ಭಕ್ತಿಯ ಪ್ರಪಂಚದಲ್ಲಿ ನೀವು ಇದ್ದೀರಿ ಎಂದು ತಿಳಿಸಿದರು.
ಭಗವಂತನಿಗೆ ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಗೊತ್ತಿದೆ. ಭಗವಂತ ಜನ್ಮ ನೀಡಿದ್ದಾನೆ. ನಾವು ಏಕೆ ಹುಟ್ಟಿದ್ದೇವೆ ಎಂಬುದಕ್ಕೆ ಉತ್ತರ ನಮ್ಮೊಳಗೆ ಇದೆ. ನಾವು ಅದನ್ನು ತಿಳಿದುಕೊಂಡರೆ ಜೀವನ ಸಾರ್ಥಕ. ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು. ನಾನು ಎಂಬ ಅಸ್ತಿತ್ವವನ್ನು ವಿಸರ್ಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ. ಇದು ನಮ್ಮ ಅಕೌಂಟ್‌ನಲ್ಲಿ ಕ್ರೆಡಿಟ್ ಆಗಿರುತ್ತದೆ ಎಂದರು. ಇದನ್ನೂ ಓದಿ: ರಾಮನವಮಿ ಮೆರವಣಿಗೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಸಾಧ್ಯವೇ? ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಶಂಕರಾಚಾರ್ಯರ ಪರಂಪರೆ, ಶಾರದೆ, ಲಕ್ಷ್ಮಿನರಸಿಂಹರ ಆಶೀರ್ವಾದ ಇರಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಮಠದ ಪಾತ್ರ ಬಹಳ ಮುಖ್ಯ. ಅವರು ಕರ್ತವ್ಯ ಮಾಡುತ್ತಿರುವುದರಿಂದ ನೈತಿಕತೆ ಉಳಿದಿದೆ. ಮಠದಿಂದ ಸಮಾಜದ ಪರಿವರ್ತನೆ, ಬದಲಾವಣೆ ಕಾರ್ಯ ನಡೆಯಲಿ. ಸ್ವರ್ಗ ಎಲ್ಲೂ ಇಲ್ಲ, ಇಲ್ಲೇ ಇದೆ. ನಮ್ಮೊಳಗೆ ಇದೆ. ಅನುಭವಿಸಬೇಕಷ್ಟೆ ಎಂದು ತಿಳಿಸಿದರು.
ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ವರ್ಕ್ ಇಸ್ ವರ್ಶಿಪ್. ನ್ಯಾಯ-ನೀತಿಯ ಸಮಾಜ ಸ್ಥಾಪನೆ ಆಗಬೇಕು. ಶಂಕರಾಚಾರ್ಯರ ವಿಚಾರ, ಆಚಾರ-ತತ್ವಗಳನ್ನು ಅರ್ಥ ಮಾಡಿಕೊಂಡು, ಬದುಕಿನಲ್ಲಿ ಕಿಂಚಿತ್ತು ಅಳವಡಿಸಿಕೊಂಡಲ್ಲಿ ಸಮಾಜ ಸುಧಾರಣೆ ಆಗುತ್ತದೆ. ನಾನು ಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶ್ರದ್ಧಾಪೂರ್ವಕವಾಗಿ ತಲೆಬಾಗಿ ಶಾರದೆಗೆ ನಮಸ್ಕಾರ ಮಾಡುತ್ತೇನೆ. ಮಠದ ಮುಂದಿನ ಎಲ್ಲಾ ಕಾರ್ಯಕ್ರಮಕ್ಕೂ ನಮ್ಮ ಸರ್ಕಾರದ ಬೆಂಬಲ ಇರುತ್ತದೆ ಎಂದರು.