14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Banglore Film Festival) ಗುರುವಾರ (ಮಾ.23)ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಚಿತ್ರೋತ್ಸವದಲ್ಲಿ ಸಿಎಂ ಬೊಮ್ಮಾಯಿ ಅವರು ಕನ್ನಡದ ಕೆಜಿಎಫ್, ಕಾಂತಾರ, ಆಸ್ಕರ್ ಗೆದ್ದಿರುವ RRR ಚಿತ್ರವನ್ನ ಹಾಡಿ ಹೊಗಳಿದ್ದಾರೆ.
Advertisement
ಚಿತ್ರೋತ್ಸವ ಇಡೀ ಜಗತ್ತಿನಲ್ಲಿ ಅತ್ಯಂತ ಕಡಿಮೆ ನಗರದಲ್ಲಿ ನಡೆಯುತ್ತದೆ. ಅದರಲ್ಲಿ ಬೆಂಗಳೂರು ಒಂದಾಗಿರೋದು ಹೆಮ್ಮೆಯ ವಿಚಾರವಾಗಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರು ಫೈನಾನ್ಸ್ ಕ್ಯಾಪಿಟಲ್ ಆಗಲಿದೆ. ಮಾತಿಲ್ಲದ ಸಿನಿಮಾದಿಂದ ಹಿಡಿದು ಅತ್ಯಂತ ಅದ್ಬುತ ತಂತ್ರಜ್ಞಾನ ಬಳಕೆ ಮಾಡಿದ ಸಿನಿಮಾ ನಮ್ಮಲ್ಲಿದೆ. ಬೆಂಗಳೂರು ಅಂತರಾಷ್ಟ್ರೀಯ ನಗರ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಬರುತ್ತಾರೆ. 400 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬೆಳೆದಿದೆ. ಇಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಯದೆ ಇನ್ನೆಲ್ಲಿ ನಡೆಯುತ್ತದೆ. ಇದನ್ನೂ ಓದಿ: 14ನೇ ಬೆಂಗಳೂರು ಅಂತಾರಾಷ್ಟೀಯ ಚಿತ್ರೋತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ
Advertisement
Advertisement
ಸಿನಿಮಾಗೆ ಬಹಳ ದೊಡ್ಡ ಇತಿಹಾಸ ಇದೆ. ಅತ್ಯಂತ ಅದ್ಬುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನೆಮಾ ನೋಡುವುದಕ್ಕು ವ್ಯತ್ಯಾಸ ಇದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿರುವುದರಿಂದ ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಈಗ ತಂತ್ರಜ್ಞಾನದ ಮೂಲಕ ಹೋದರೆ ಯಶಸ್ಸು ಸಿಗುತ್ತದೆ ಎಂದರು.
Advertisement
ʻಕೆಜಿಎಫ್ʼ (KGF) ಮತ್ತು ʻಕಾಂತಾರʼ (Kantara) ಸಿನಿಮಾ ಬಗ್ಗೆ ಯಾರು ನಿರೀಕ್ಷೆ ಮಾಡಿರಲಿಲ್ಲ. ʻಕಾಂತಾರʼ ಸ್ಥಳೀಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗದುಕೊಂಡು ಹೋಗಿದ್ದು, ಆ ತಂಡಕ್ಕೆ ಅಭಿನಂದನೆಗಳು. RRR ಸಿನಿಮಾ ಆಸ್ಕರ್ ಪಡೆದಿದ್ದು ನಾವೆಲ್ಲ ಹೆಮ್ಮೆ ಪಡಬೇಕು. ಇದರಿಂದ ಆಸ್ಕರ್ ನಮಗೆ ದೂರ ಇಲ್ಲ. ಪ್ರತಿವರ್ಷ ಪಡೆಯಬಹುದು ಅಂತ ತೋರಿಸಿ ಕೊಟ್ಟಿದೆ. ಈ ವರ್ಷ ಫೆಸ್ಟಿವಲ್ ನಲ್ಲಿ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದರು.
ಸಿನಿಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನೆಮಾಗಾಗಿ ನಾನು ಏನೆಲ್ಲ ಬೇಕು, ಅದನ್ನು ಮಾಡಿದ್ದೇನೆ. ಸಿನಿಮಾ ಸಬ್ಸಿಡಿ ಹೆಚ್ಚಿಗೆ ಮಾಡಿದ್ದೇನೆ. ಸಬ್ಸಿಡಿ ಪಡೆಯುವ ಚಿತ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇನೆ. ಫಿಲ್ಮ್ ಸಿಟಿ ಕೂಡ ಆಗಲಿದೆ. ಅಲ್ಲಿ ಹಾಲಿವುಡ್ ಚಿತ್ರಗಳೂ ಶೂಟಿಂಗ್ ಆಗಬೇಕು ಎಂದರು.
ಇನ್ನೂ ಈ ವೇಳೆ ಪುನೀತ್ ಸಮಾಧಿ ಅಭಿವೃದ್ಧಿ ಮತ್ತು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವ ಬಗ್ಗೆ ಸಿಎಂ ಮಾತನಾಡಿದ್ದಾರೆ. ನಾವು ಈಗಾಗಲೇ ಪವರ್ ಸ್ಟಾರ್ ಪುನೀತ ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಇದೇ ವರ್ಷ ನಟ ದಿ.ಪುನಿತ್ ರಾಜಕುಮಾರ್ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಇದರ ಜೊತೆಗೆ ಅಂಬರೀಶ್ ಅವರ ಸ್ಮಾರಕ ಸಿದ್ದವಾಗುತ್ತಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ತೀರ್ಮಾನಿಸಲಾಗಿದೆ. ಮಾರ್ಚ್ 27 ರಂದು ಸ್ಮಾರಕ ಹಾಗೂ ಹೆಸರಿಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಈ ಸಂದರ್ಭಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ರಾಜೀವ್ ಚಂದ್ರಶೇಖರ್, ಸಚಿವ ಆರ್. ಅಶೋಕ್ ಹಾಗೂ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ, ಹರ್ಷಿಕಾ, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು