ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ನಗರದಲ್ಲಿ ನಾಲ್ಕು ವರ್ಷಗಳ ಬಳಿಕ ಅತ್ಯಧಿಕ ಮಳೆ ದಾಖಲಾಗಿದ್ದು, ಈ ವರ್ಷ ವಾಡಿಕೆಗಿಂತ ಹೆಚ್ಚು ವರ್ಷಧಾರೆಯಾಗಿದೆ. ಅಕ್ಟೊಬರ್ 15 ರಂದು 281 ಮೀ.ಮೀ ಮಳೆಯಾಗಿತ್ತು. ನಿನ್ನೆ ವಾಡಿಕೆಗಿಂತ ಶೇ.60ರಷ್ಟು ಹೆಚ್ಚು ಮಳೆ ಸುರಿದಿತ್ತು. ಇದು ಬೆಂಗಳೂರಿನಲ್ಲಿ 2017ರ ಬಳಿಕ ಸುರಿದ ಅಧಿಕ ಮಳೆಯಾಗಿದೆ. ಇದನ್ನೂ ಓದಿ: ಮಹಾಮಳೆಯ ಭೂಕುಸಿತಕ್ಕೆ ತತ್ತರಿಸಿದ ದೇವರ ನಾಡು – ಅವಶೇಷಗಳಡಿ 26 ಶವ ಪತ್ತೆ
ನಿನ್ನೆ ಮಲ್ಲೇಶ್ವರಂ, ಯಶವಂತಪುರ, ಗೋರಗುಂಟೆ ಪಾಳ್ಯ, ರಾಜಕುಮಾರ್ ಸಮಾಧಿ, ಇಸ್ಕಾನ್ ಸೇರಿದಂತೆ ಹಲವೆಡೆ ಬೆಳಗಿನ ಜಾವವೇ ಮಳೆ ಆರಂಭವಾಗಿತ್ತು. ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದರು. ಇಂದು ಮಳೆರಾಯ ಸ್ವಲ್ಪ ಮಟ್ಟಿನ ಬಿಡುವು ನೀಡಿದ್ದು, ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಮಳೆರಾಯನ ಆರ್ಭಟಕ್ಕೆ ಬೆಚ್ಚಿಬಿದ್ದ ಕೇರಳ – ಸಾವಿನ ಸಂಖ್ಯೆ 26ಕ್ಕೆ ಏರಿಕೆ
ಸಿಎಂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸ್ಥಳೀಯ ಶಾಸಕರಾದ ಸತೀಶ್ ರೆಡ್ಡಿ, ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್, ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಗೌರವ್ ಗುಪ್ತ, ಜಲಮಂಡಳಿ ಅಧ್ಯಕ್ಷರಾದ ಜಯರಾಮ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.