ಹಾವೇರಿ: ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿ 25 ಲಕ್ಷ ರೂ. ಪರಿಹಾರದ ಚೆಕ್ ಕೊಟ್ಟಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಕೇರಿ ಗ್ರಾಮದಲ್ಲಿರುವ ನವೀನ್ ಕುಟುಂಬವನ್ನು ಬೊಮ್ಮಾಯಿ ಮತ್ತು ಬಿಜೆಪಿ ಮುಖಂಡರು ಭೇಟಿ ಮಾಡಿ ಅವರಿಗೆ ಸಾಂತ್ವದ ಮಾತುಗಳನ್ನಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ನವೀನ್ ಭಾವಚಿತ್ರಕ್ಕೆ ಹೂವು ಹಾಕಿ ನಮನ ಸಲ್ಲಿಸಿದರು.
ತಂದೆ ಶೇಖರ್ ಗೌಡ ಅವರ ಕೈಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ ವೇಳೆ ನವೀನ್ ಮೃತ ದೇಹ ಚಳಗೇರಿಗೆ ತರುವಂತೆ ಪೋಷಕರು ಮತ್ತು ಗ್ರಾಮಸ್ಥರು ಲಿಖಿತ ಮನವಿ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ, ಬಾಂಬಿಂಗ್ ಪರಿಣಾಮ ನವೀನ ಸಾವನ್ನಪ್ಪಿದ್ದಾನೆ. ವಿದ್ಯಾರ್ಜನೆಗೆ ತೆರಳಿದ್ದ ನವೀನ್‍ಗೆ ಈ ರೀತಿ ಆಗುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನವೀನ್ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
ಉಕ್ರೇನ್ ನಲ್ಲಿ ಸುತ್ತಲೂ ಬಾಂಬಿಂಗ್ ಅಗ್ತಿದೆ. ಹೀಗಾಗಿ ತರಲು ಆಗುತ್ತಿಲ್ಲ. ಇವತ್ತು ಯುದ್ದ ವಿರಾಮ ಆಗಿದೆ. ಆದಷ್ಟು ಬೇಗ ಪಾರ್ಥೀವ ಶರೀರವನ್ನ ತರೋ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಯುದ್ಧ ನಿಲ್ಲಲಿ ಎಂದು ವಿನಂತಿ. ಕೆಲವರು ನಡೆದುಕೊಂಡು ಬಂದಿದ್ದಾರೆ. ಕೆಲವರು ಬಂಕರ್ ಗಳಲ್ಲಿದ್ದಾರೆ. ನಮ್ಮ ಜಿಲ್ಲೆಯಿಂದ ಹತ್ತು ಜನರು ಹೋಗಿದ್ದರು ಎಂದು ವಿವರಿಸಿದರು.
ಐವರು ಬಂದಿದ್ದಾರೆ, ಉಳಿದ ಐವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಇಪ್ಪತ್ತೈದು ಲಕ್ಷ ರುಪಾಯಿ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಹಿರಿಯ ಮಗನಿಗೆ ಸೂಕ್ತ ಉದ್ಯೋಗದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ವ್ಯವಸ್ಥೆ ಪರಿಶೀಲನೆ ಬಗ್ಗೆ ಕೇಂದ್ರ ಮಟ್ಟದಲ್ಲೂ ದೊಡ್ಡ ಚರ್ಚೆ ಆಗಿದೆ. ಸೆಲೆಕ್ಷನ್ ಪ್ರಕ್ರಿಯೆ, ಸೀಟು ಹಂಚಿಕೆ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪಾರ್ಥೀವ ಶರೀರ ಹಾಗೂ ಅಲ್ಲಿ ಸಿಲುಕಿಕೊಂಡಿರೋರನ್ನು ಕರೆತರುವುದು ನಮ್ಮ ಮುಂದಿರುವ ಎರಡು ದೊಡ್ಡ ಕೆಲಸಗಳು ಎಂದು ಹೇಳಿದರು.
ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.