Bengaluru CityDistrictsKarnatakaLatestMain Post

ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಬೆಲೆ ಇಲ್ಲ: ಬೊಮ್ಮಾಯಿ

Advertisements

ಬೆಂಗಳೂರು: ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಯಾವುದೇ ಕಾನೂನಿನ ಬೆಲೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಖಂಡಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಮೇಕೆದಾಟು ಯೋಜನೆ ತಮಿಳುನಾಡಿಗೆ ಕಾವೇರಿ ಒಂದು ರಾಜಕೀಯ ದಾಳ. ಸ್ವಾತಂತ್ರ್ಯ ದೊರೆತಾಗಿನಿಂದ ಕಾವೇರಿ ಹೆಸರಿನಲ್ಲಿಯೇ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾವೇರಿ ಜಲವಿವಾದ ನ್ಯಾಯಮಂಡಲಿ ತೀರ್ಪು ನೀಡಿ ನೀರಿನ ಹಂಚಿಕೆಯಾಗಿದೆ. ನೀರನ್ನು ನೀಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇದೆ. ನಮ್ಮ ರಾಜ್ಯದಲ್ಲಿ ಹುಟ್ಟಿರುವ ಕಾವೇರಿ, ಇಲ್ಲಿ ಬಿದ್ದ ಮಳೆಯ ಆಧಾರದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ರೂಪಿಸಿದ್ದೇವೆ. ಇಷ್ಟೆಲ್ಲಾ ಇದ್ದರೂ ತಮಿಳುನಾಡಿನವರು ತಕರಾರು ಮಾಡುತ್ತಿದ್ದಾರೆ. ವಿವಿಧ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

ರಾಷ್ಟ್ರೀಯ ಹಸಿರು ನ್ಯಾಯಮಂಡಲಿ ನಮ್ಮ ಪರವಾಗಿ ಆದೇಶ ನೀಡಿದೆ. ತಮಿಳುನಾಡು ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಹಾಕಿದೆ. ಸರ್ವ ಪಕ್ಷ ಸಭೆ ನಡೆಸಿ ಒಗ್ಗಟ್ಟಿನಿಂದ ಇದನ್ನು ಎದುರಿಸಲು ತೀರ್ಮಾನ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಣಯ ಮಾಡಿದ್ದಾರೆ. ಇದಕ್ಕೆ ಯಾವುದೇ ಬೆಲೆ ಇಲ್ಲ ಹಾಗೂ ಕಾನೂನಿನ ಪ್ರಕಾರವೂ ಇಲ್ಲ. ರಾಜಕೀಯ ತಂತ್ರವಷ್ಟೇ. ಈ ರೀತಿಯ ಹತ್ತು ಹಲವಾರು ನಿರ್ಣಯಗಳಾಗಿವೆ. ಅದಕ್ಕೆ ಬೆಲೆ ಇಲ್ಲ. ಸರ್ವ ಪಕ್ಷ ಸಭೆಯಲ್ಲಿ ನಿರ್ಣಯಿಸಿದಂತೆ ಡಿಪಿಆರ್ ಪಡೆದು ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದು ಯೋಜನೆ ಅನುಷ್ಠಾನಕ್ಕೆ ಎಲ್ಲ ಕ್ರಮವನ್ನು ಸರ್ಕಾರ ತೆಗೆದುಗೊಳ್ಳಲಿದೆ ಎಂದಿದ್ದಾರೆ.

ಇದೇ ವೇಳೆ ಬೆಳಗಾವಿ ಫೈಲ್ಸ್ ಸಿನಿಮಾ ಬರಲಿ ಎಂಬ ಶಿವಸೇನೆ ಮುಖಂಡ ಸಂಜಯ್ ರಾವತ್ ಟ್ವೀಟ್ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ವಿಷಯದ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದೆ. 1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಆಯೋಗದ ಅನುಗುಣವಾಗಿ ಆಗಿದೆ. ಕನ್ನಡ ಮಾತನಾಡುವ ಸೊಲ್ಲಾಪುರ, ಅಕ್ಕಲ್ ಕೋಟೆ ಭಾಗಗಳು ಮಹಾರಾಷ್ಟ್ರದಲ್ಲಿ ಉಳಿದಿವೆ. ಸಂಜಯ್ ರಾವತ್ ಈ ರೀತಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬೆಳಗಾವಿ ಹೆಸರಿನಲ್ಲಿ ಅಲ್ಲಿರುವ ಸಮಸ್ಯೆಗಳ ದಿಕ್ಕು ಬದಲಾಯಿಸಲು ಈ ಕೆಲಸವನ್ನು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ

Leave a Reply

Your email address will not be published.

Back to top button