ನವದೆಹಲಿ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಉಮೇಶ್ ಕತ್ತಿ ಹೀಗೆ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು. ಸರ್ಕಾರದ ಮುಂದೆ ಆ ರೀತಿಯಾದ ಯಾವುದೇ ಪ್ರಸ್ತಾಪಗಳಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ
ದೆಹಲಿ ಭೇಟಿ ಕುರಿತು ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಸೂಚಕರಾಗಿ ಸಹಿ ಮಾಡಲು ಆಗಮಿಸಿದ್ದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಿಲ್ಲ. ಕೇಂದ್ರ ಸಚಿವರನ್ನೂ ಭೇಟಿ ಮಾಡಲ್ಲ. ನಾಮಪತ್ರ ಸಲ್ಲಿಕೆ ವಿಚಾರವೇ ಹೊರತು ಇನ್ಯಾವುದೇ ರಾಜಕೀಯ ಬೆಳವಣಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾರಿಕೆ ಉತ್ತರ ನೀಡಿದರು. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೇ ಕೊಡಿ ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ.