ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಾನವೀಯ ಮೌಲ್ಯಗಳುಳ್ಳ, ಭಾವನಾತ್ಮಕ ವ್ಯಕ್ತಿ ಎಂಬುದು ತಿಳಿದಿರುವ ವಿಚಾರ. ಅದೇ ರೀತಿ ಅವರ ಮನೆಯ ಮುದ್ದಿನ ನಾಯಿ ಸನ್ನಿ ಬಗ್ಗೆ ಸಹ ಭಾವನಾತ್ಮಕ ಸಂಬಂಧ ಹೊಂದಿದ್ದರು. ಇದನ್ನು ನೆನೆದು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಸಹ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ಸನ್ನಿ ನಮ್ಮ ಮನೆಯ ಮುದ್ದಿನ ನಾಯಿಯಾಗಿತ್ತು. ಕುಟುಂಬದ ಎಲ್ಲ ಜೊತೆ ಬೆರೆಯುತ್ತಿತ್ತು. ಹೀಗಾಗಿ ತುಂಬಾ ಹಚ್ಚಿಕೊಂಡಿದ್ದೆವು. ನನ್ನ ಮಗಳಿಗೂ ಸನ್ನಿ ಎಂದರೆ ತುಂಬಾ ಇಷ್ಟವಾಗಿತ್ತು. ಮಗಳ ಹುಟ್ಟುಹಬ್ಬಕ್ಕೆ ನಾಯಿಯ ಗಿಫ್ಟ್ ಕೇಳಿದ್ದಳು. ಅದರಂತೆ ನಾಯಿಯನ್ನು ಮನೆಗೆ ತರಲಾಗಿತ್ತು. ಬಳಿಕ 14 ವರ್ಷಗಳ ಕಾಲ ಸನ್ನಿ ನಮ್ಮ ಮನೆಯಲ್ಲಿ ಕುಟುಂಬದ ಸದಸ್ಯನಾಗಿತ್ತು ಎಂದು ನೆನಪನ್ನು ಹಂಚಿಕೊಂಡರು. ಇದನ್ನೂ ಓದಿ: ಕುಟುಂಬದ ಓರ್ವ ಪ್ರೀತಿಯ ಸದಸ್ಯನನ್ನು ಕಳೆದುಕೊಂಡೆ – ಬೊಮ್ಮಾಯಿ
ಇಂದು ನಮ್ಮ ಮನೆಯ ಮುದ್ದಿನ ನಾಯಿ “ಸನ್ನಿ” ವಯೋಸಹಜ ದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು.
ಓಂ ಶಾಂತಿಃ… pic.twitter.com/PszIOoMsTO
— Basavaraj S Bommai (@BSBommai) July 12, 2021
ಇತ್ತೀಚೆಗೆ ಸನ್ನಿ ಸಾವನ್ನಪ್ಪಿತು. ಇದರ ದುಃಖ ಮರೆಯಲು ಆಗುತ್ತಿಲ್ಲ. ಸನ್ನಿಯ ಸ್ಥಾನವನ್ನು ಬೇರೆ ಯಾವುದೇ ನಾಯಿ ತುಂಬಲು ಸಾಧ್ಯವಿಲ್ಲ ಎಂದು ಈ ವರೆಗೆ ಬೇರೆ ನಾಯಿಯನ್ನು ತಂದಿಲ್ಲ ಎಂದು ತಿಳಿಸಿದರು. ಅಲ್ಲದೆ ಇದೇ ವೇಳೆ ತಮ್ಮ ಮುದ್ದಿನ ನಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಸೂರ್ಯನಷ್ಟೇ ಪ್ರಕಾಶಮಾನವಾಗಿರಬೇಕು ಎಂಬ ಉದ್ದೇಶದಿಂದ ಸನ್ ಅಂದರೆ ಸೂರ್ಯ ಎಂಬರ್ಥದಲ್ಲಿ ಅದಕ್ಕೆ ಸನ್ನಿ ಎಂಬ ಹೆಸರಿಟ್ಟಿದ್ದೆವು. ನಮ್ಮ ಕುಟುಂಬದವರೊಂದಿಗೆ ತುಂಬಾ ಬೆರೆತಿತ್ತು. ಹೀಗಾಗಿ ಸನ್ನಿ ತೀರಿಕೊಂಡಾಗ ಬಹಳ ನೋವಾಗಿತ್ತು ಎಂದು ಹೇಳಿದರು.