ತುಮಕೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದಿದ್ದಾರೆ.
ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ 7ನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮ ಇತ್ತು. ಹಾಗಾಗಿ ಸಿಎಂ ಮಠಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ. ಮೊದಲು ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ಬಳಿಕ ಹೊಸ ಮಠದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಇದೇ ವೇಳೆ ಸಿದ್ದಗಂಗಾ ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ ಚೆಕ್ ಸಿಎಂಗೆ ಹಸ್ತಾಂತರಿಸಲಾಯಿತು.
Advertisement
Advertisement
ಸಿಎಂ ಆಗಮನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಶಿವಕುಮಾರ ಶ್ರೀಗಳ ಕಚೇರಿ ತೆರೆಯಲಾಗಿತ್ತು. ಈ ಕಚೇರಿಯಲ್ಲೇ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನಕ್ಕೆ ಬಂದಿದ್ದೇನೆ. ಅವರ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ನಾನು ಸಿಎಂ ಆಗಿದ್ದನ್ನು ಅವರು ನೋಡಿದರೆ ಎಷ್ಟು ಸಂತಸ ಪಡುತ್ತಿದ್ದರು. ಅವರ ಸಂತಸ ನೋಡುವ ಸೌಭಾಗ್ಯ ನನಗೆ ಇಲ್ಲ. ಆದರೂ ಸಹ ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಶಿವಕುಮಾರ ಶ್ರೀಗಳನ್ನು ನೆನಪಿಸಿಕೊಂಡರು.
Advertisement
Advertisement
ಉಮೇಶ್ ಕತ್ತಿ, ಹೆಚ್‍ಡಿಕೆ ಭೇಟಿ ವಿಚಾರದಲ್ಲಿ ಮಾತನಾಡಿದ ಸಿಎಂ, ಅದರಲ್ಲಿ ಸತ್ಯಾಂಶ ಇಲ್ಲ, ಮಂಗಳವಾರ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಜೊತೆ ನಾವು ಒಂದು ಗಂಟೆ ಕುಳಿತು ಮಾತನಾಡಿದ್ದೇವೆ. ಅವರಿಗೆ ಅವಕಾಶ ಸಿಗಬೇಕು ಎನ್ನುವುದು ನಮ್ಮ ಮನಸ್ಸಿನಲ್ಲಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.