ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರೇ ಪ್ರವಾಹದ ವಿಚಾರದಲ್ಲಿ ನಾಡಿನ ಜನತೆಗೆ ಯಾಕೆ ಸುಳ್ಳು ಹೇಳ್ತೀರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪನವರು ಸಿಎಂ ಆಗುತ್ತಿದ್ದಂತೆ ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಯ್ತು. ಸರ್ಕಾರ ರಚನೆ ಆದ 20 ದಿನ ಸಚಿವರೇ ಇರಲಿಲ್ಲ. ಪ್ರವಾಹ ಬಂದು 90 ದಿನಗಳಾಗುತ್ತಾ ಬಂದಿದೆ. ಇದೂವರೆಗೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನನ್ನ ಹೇಳಿಕೆ ಸುಳ್ಳು ಎಂದು ಹೇಳುತ್ತಾರೆ. ಹಾಗಾದಾರೆ ನಾನು ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತೆನಾ ಎಂದು ಗರಂ ಆದರು.
ನಾಲ್ಕು ದಶಕಗಳ ಕಾಲ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಕೇಂದ್ರಕ್ಕೆ ನೀಡಿರುವ ವರದಿಯಲ್ಲಿ 2,47,628 ಮನೆಗಳು ಬಿದ್ದಿವೆ ಎಂದು ಉಲ್ಲೇಖಿಸಲಾಗಿದೆ. ಇಲ್ಲಿ 97 ಸಾವಿರ ಎಂದು ಜಾಹಿರಾತು ನೀಡಲಾಗಿದೆ. ಅಲ್ಲಿ 2 ಲಕ್ಷ ತೋರಿಸಿ ಇಲ್ಲಿ 97 ಸಾವಿರ ಅಂದರೆ ಸುಳ್ಳಲ್ವಾ? ಪ್ರವಾಹದ ವಿಚಾರದಲ್ಲಿ ನಾಡಿನ ಜನತೆಗೆ ಯಾಕೆ ಸುಳ್ಳು ಹೇಳ್ತೀರಾ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಸಂತ್ರಸ್ತರಿಗಾಗಿ ಶೆಡ್ ಹಾಕಲಾಗಿದ್ದು, ಶೌಚಾಲಯ ನಿರ್ಮಿಸಿಲ್ಲ. ಸಂತ್ರಸ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಹಾಗಾಗಿ ಜನರು ಶೆಡ್ ಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯಿಂದಾಗಿ ಶಾಲಾ ಕಟ್ಟಡಗಳು ಬಿದ್ದಿದ್ದು, ಬಯಲಿನಲ್ಲಿಯೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರವಾಹದಲ್ಲಿ 1,800 ಮಗ್ಗಗಳು ಮಳೆಗೆ ಕೊಚ್ಚಿ ಹೋಗಿವೆ. ಸರ್ಕಾರ ಒಂದು ಮಗ್ಗಕ್ಕೆ 25 ಸಾವಿರ ನೀಡಲಾಗುವುದು ಎಂದು ಹೇಳಿದೆ. ಪರಿಹಾರ ವಿತರಣೆಯಲ್ಲಿ ಒಂದು ಮಗ್ಗಕ್ಕೂ 25 ಸಾವಿರ ಮತ್ತು 6 ಮಗ್ಗಕ್ಕೂ 25 ಸಾವಿರ ರೂಪಾಯಿ ನೀಡಲಾಗಿದೆ. ಇನ್ನು ಅಂಗಡಿ ಮುಗ್ಗಟ್ಟು ಕಳೆದುಕೊಂಡವರಿಗೂ 25 ಸಾವಿರ ರೂ. ನೀಡಲಾಗಿದೆ. ಪರಿಹಾರ ವಿತರಣೆಯಲ್ಲಿ ಸ್ಪಷ್ಟತೆ ಇಲ್ಲ. ಈ ಪರಿಹಾರ ಸಂತ್ರಸ್ತರಿಗೆ ತಲುಪಿಲ್ಲ ಎಂದು ಸರ್ಕಾರ ಆಡಳಿತ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.