ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿರುವ 2020-21ನೇ ಸಾಲಿನ ರಾಜ್ಯ ಮುಂಗಡಪತ್ರ ಹಿಂದಿನ ಮುಂಗಡಪತ್ರಗಳಿಗಿಂತ ವಿಭಿನ್ನವಾಗಿದೆ. ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಬಜೆಟ್ ಸಂಪ್ರದಾಯದ ಚೌಕಟ್ಟು ದಾಟಿದ್ದಾರೆ.
ರಾಜ್ಯದ ಬಜೆಟ್ ಇತಿಹಾಸದಲ್ಲಿ ಹೊಸ ಸಂಪ್ರದಾಯ ಆರಂಭಿಸಿರುವ ಸಿಎಂ ಯಡಿಯೂರಪ್ಪ, ಇದುವರೆಗೆ ಯಾರೂ ರೂಪಿಸದ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಸಲ ಇಲಾಖಾವಾರು ಬಜೆಟ್ ಮಂಡನೆಗೆ ಬ್ರೇಕ್ ಹಾಕಿದ ಬಿಎಸ್‍ವೈ, ಇಲಾಖಾವಾರು ಬದಲು ವಯಲವಾರು ವಿಂಗಡಿಸಿ ಬಜೆಟ್ ಮಂಡನೆ ಮಾಡಿದ್ದಾರೆ. ಆರು ವಲಯದಲ್ಲಿ 34 ಇಲಾಖೆಗಳನ್ನು ಹಂಚಿಕೆ ಮಾಡುವ ಮೂಲಕ ಅನುದಾನ ಘೋಷಿಸಲಾಗಿದೆ.
Advertisement
Advertisement
ಲಭ್ಯ ಆರ್ಥಿಕ ಇತಿಮಿತಿಯಲ್ಲೇ ಸಿಎಂ ಯಡಿಯೂರಪ್ಪ ಈ ಬಾರಿ ಬಜೆಟ್ ಕೊಟ್ಟಿದ್ದಾರೆ. ಬಜೆಟ್‍ನಲ್ಲಿ ಸರ್ಕಾರದ ಇಲಾಖೆಗಳನ್ನು ವಲಯವಾರು ಹಂಚಿರೋದು ವಿಭಿನ್ನ ಪ್ರಯೋಗವೇನೋ ಸರಿ. ಆದರೆ ಸಂಪುಟ ಸಚಿವರಿಗೆ ಇದೇ ಒಂದು ದೊಡ್ಡ ಗೊಂದಲ ಸೃಷ್ಟಿಸಿದೆ ಎಂದು ತಿಳಿದು ಬಂದಿದೆ. ಯಾವ ಇಲಾಖೆ, ಯಾವ ವಲಯದಲ್ಲಿ ಸೇರಿದೆ ಅನ್ನೋದೇ ಸಚಿವರಿಗೆ ಕನ್ಫ್ಯೂಷನ್ ಹುಟ್ಟಿಸಿದೆ ಎನ್ನಲಾಗಿದೆ.
Advertisement
ಇದೀಗ ಸಚಿವರು ತಮ್ಮ ಗೊಂದಲ ಬಗೆಹರಿಸಿಕೊಳ್ಳಲು ತಮ್ಮ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರು ಬಜೆಟ್ ಅರ್ಥವಾಗದೇ ತಮ್ಮ ತಮ್ಮಲ್ಲೇ ಒಳ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವರು ಬಜೆಟ್ ಹೇಗಿದೆ ಅಂತ ಬಹಿರಂಗವಾಗಿ ಅಭಿಪ್ರಾಯ ಹೇಳಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
Advertisement
ಮೇಲ್ನೋಟಕ್ಕೆ ಕೆಲವು ಪ್ರಮುಖ ವಿಷಯಗಳು ಮಾತ್ರ ಬಜೆಟ್‍ನಲ್ಲಿ ಗೋಚರವಾಗಿದೆ. ಉಳಿದಂತೆ ಬಜೆಟ್‍ನಲ್ಲಿ ಇಲಾಖಾವಾರು ಏನೇನು ಸಿಕ್ಕಿದೆ ಅನ್ನೋದೇ ಸಚಿವರಿಗೆ ಅರ್ಥವಾಗಿಲ್ಲವಂತೆ. ಸಿಎಂ ಮಂಡಿಸಿದ ಬಜೆಟ್‍ನ ತಲೆಬುಡ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿರುವ ಸಚಿವರು ಅಧಿಕಾರಿಗಳ ಮೊರೆ ಹೋಗುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳ ಅಧಿಕಾರಿಗಳಿಂದ ಸಚಿವರು ಬಜೆಟ್ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳಿಗೆ ಏನೇನು ಸಿಕ್ಕಿದೆ, ಹಳೆಯ ಅನುದಾನ ಎಷ್ಟು, ಹೊಸ ಅನುದಾನ ಎಷ್ಟು ಅನ್ನೋ ಮಾಹಿತಿಗೆ ಅಧಿಕಾರಿಗಳ ಬಳಿ ಸಚಿವರು ಹೋಗುತ್ತಿದ್ದಾರೆ. ಈ ಕಸರತ್ತಿನಲ್ಲಿ ಸಚಿವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸಚಿವರ ಪಾಡು ಈಗ, ಮೊದಲು ಬಜೆಟ್ ಅರ್ಥ ಮಾಡಿಕೊಳ್ಳುವುದು, ಉಳಿದದ್ದು ನಂತರ ಅನ್ನುವಂತಾಗಿದೆ ಎನ್ನಲಾಗಿದೆ.
#Budget2020 #KarnatakaBudget #BudgetSpeech2020 pic.twitter.com/1N3c23DnLm
— CM of Karnataka (@CMofKarnataka) March 5, 2020
ರಾಜ್ಯ ಬಜೆಟ್‍ನ ವಲಯವಾರು ವಿಂಗಡಣೆ ಹೀಗಿದೆ:
1) ಕೃಷಿ ಮತ್ತು ಪೂರಕ ಚಟುವಟಿಕೆಗಳು
2) ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ
3) ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ
4) ಬೆಂಗಳೂರು ಸಮಗ್ರ ಅಭಿವೃದ್ಧಿ
5) ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು