ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಡಿಗಿನಲ್ಲಿ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕೇಳದೇ ಕೇವಲ ತಮ್ಮ ಸ್ವಂತ ಓಡಾಟಕ್ಕೆ ಬಳಸಲು ಕೇಳುತ್ತಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ಮುಖ್ಯಮಂತ್ರಿಗಳು ನಿರಾಶ್ರಿತರನ್ನು ರಕ್ಷಿಸುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ರಕ್ಷಣಾ ಕಾರ್ಯಕ್ಕೆ ಬೇಕಾಗುವ ಹೆಲಿಕಾಪ್ಟರ್ ಗಾಗಿ ವಾಯುಸೇನೆಯ ಅಧಿಕಾರಿಗಳ ಜೊತೆ ಮನವಿ ಮಾಡಿಕೊಂಡಿಲ್ಲವೆಂದು ಆಕ್ರೋಶ ಹೊರಹಾಕಿದರು.
ವೈಮಾನಿಕ ಸಮೀಕ್ಷೆ ವೇಳೆ ಹೆಲಿಕಾಪ್ಟರ್ ನಲ್ಲಿ ಪತ್ರಿಕೆ ಓದುವ ಮೂಲಕ ನೊಂದವರಿಗೆ ಸಿಎಂ ಅವಮಾನ ಮಾಡಿದ್ದಾರೆ. ಜಿಲ್ಲೆಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಧಿಕಾರಿಗಳು ಜಿಲ್ಲಾಡಳಿತದ ಕಚೇರಿಯಲ್ಲಿ ಕುಳಿತು ಸಭೆ ಮಾಡುವುದಲ್ಲ. ಕಚೇರಿ ಬಿಟ್ಟು ಹೊರ ಬಂದು ಕೆಲಸ ಮಾಡಿ. ಶೀಘ್ರವೇ ಪರಿಸ್ಥಿತಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯಕ್ಕೆ ಮಾಹಿತಿ ನೀಡಬೇಕು. ಮಾಹಿತಿ ಬಂದ ಬಳಿಕ ಕೇಂದ್ರ ಸರ್ಕಾರದಲ್ಲಿ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ದಾನಿಗಳಿಂದ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ವಸ್ತುಗಳು ದುರುಪಯೋಗವಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಪರಿಹಾರ ಕೇಂದ್ರದ ನಿರಾಶ್ರಿತರಿಗೆ ತಲುಪಬೇಕಾಗಿರುವ ವಸ್ತುಗಳು ಉಳ್ಳವರ ಪಾಲಾಗುತ್ತಿವೆ. ಹರಿದು ಬರುತ್ತಿರುವ ವಸ್ತುಗಳನ್ನು ದಾಸ್ತಾನು ಮಾಡಲು ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ದಾನಿಗಳಿಂದ ಸಂಗ್ರಹಗೊಂಡ ವಸ್ತುಗಳು ದುರಪಯೋಗ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv