ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

Public TV
1 Min Read
arvind kejriwal banega swasth india

– ದೇಶ ರಕ್ಷಿಸೋ ಸೈನಿಕರಿಗಿಂತ ವೈದ್ಯರ ಕೆಲಸ ಕಡಿಮೆಯಿಲ್ಲ

ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವವರು “ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯಿಲ್ಲ”. ಹೀಗಾಗಿ ಕೊವೀಡ್-19 ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

“ಯುದ್ಧದ ಸಮಯದಲ್ಲಿ ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾನೆ. ಆದ್ದರಿಂದ ನಮ್ಮ ಇಡೀ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಇಂದು ಆರೋಗ್ಯ ಕಾರ್ಯಕರ್ತರು ಕೂಡ ದೇಶದ ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿಯ ಕೆಲಸವು ಸೈನಿಕರ ಕೆಲಸಕ್ಕಿಂತ ಕಡಿಮೆಯಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.

“ಈ ಹಿಂದೆ ದೆಹಲಿ ಸರ್ಕಾರ ದೇಶಕ್ಕಾಗಿ ಹೋರಾಡುವಾಗ ಯಾವುದೇ ಸೈನಿಕ ಹುತಾತ್ಮರಾದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದುರಾದೃಷ್ಟವಶಾತ್ ಯಾವುದೇ ಆರೋಗ್ಯ ಕಾರ್ಯಕರ್ತ, ವೈದ್ಯ, ನೈರ್ಮಲ್ಯ ಕಾರ್ಮಿಕರು ಅಥವಾ ನರ್ಸ್ ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ವೈದ್ಯಕೀಯ ವೃತ್ತಿಪರರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಕೊರೊನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

ನಿಮ್ಮ ಸ್ಥೈರ್ಯ ಮತ್ತು ಕರ್ತವ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನೀವು ನೀಡಿರುವ ಸಲಹೆಗಳನ್ನು ಶೀಘ್ರದಲ್ಲಿಯೇ ದೆಹಲಿ ಸರ್ಕಾರ ಕಾರ್ಯಗತಗೊಳಿಸುತ್ತದೆ ಎಂದು ಭರವಸೆ ಕೂಡ ನೀಡಿದರು. ದೆಹಲಿಯಲ್ಲಿ ಇದುವರೆಗೂ 120 ಕೊರೊನಾ ಸೋಂಕಿತ ರೋಗಿಗಳಿದ್ದಾರೆ ಎಂದು ವರದಿಯಾಗಿದೆ .

Share This Article
Leave a Comment

Leave a Reply

Your email address will not be published. Required fields are marked *