ಸಾಲ ಮನ್ನಾದ ಹಣ ರೀಫಂಡ್ – ಮತ್ತೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ

Public TV
4 Min Read
cm saala

ಬೆಂಗಳೂರು: ಯಾದಗಿರಿ ರೈತರ ಖಾತೆಗೆ ಜಮೆಯಾಗಿದ್ದ ಸಾಲ ಮನ್ನಾದ ಹಣ ರೀಫಂಡ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಮತ್ತೆ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಬ್ಯಾಂಕ್ ನವರೇ ನಮ್ಮಿಂದ ತಪ್ಪಾಗಿದೆ ಅಂತ ಹೇಳಿದ್ದಾರೆ. ಮಾಧ್ಯಮಗಳು ಸುಮ್ಮನೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ನಿಮಗೆ ಏನು ಲಾಭ? ನಿಮ್ಮ ಎಡಿಟರ್ ಗಳಿಗೆ ಈ ಬಗ್ಗೆ ಹೇಳಿ ಎಂದು ಕಿಡಿ ಕಾರಿದ್ದಾರೆ.

ydr sala manna 3

ಬೆಳಗ್ಗೆಯಿಂದ ನೀವು ಸುದ್ದಿ ಮಾಡುತ್ತಿದ್ದೀರಿ. ಇದರಿಂದ ನಿಮಗೆ ಏನು ಪ್ರಯೋಜನ? ರಾಷ್ಟ್ರೀಯ ಬ್ಯಾಂಕಿನಿಂದ ಆಗಿರುವ ತಪ್ಪಿಗೆ ನಮ್ಮನ್ನು ಯಾಕೆ ದೂಷಣೆ ಮಾಡುತ್ತೀರಿ. ಮೋದಿ ಬಗ್ಗೆ ದಿನಾ ಹೊಗಳುತ್ತೀರಿ ಅಲ್ಲವೇ? ಇದರ ಬಗ್ಗೆಯೂ ಮಾತನಾಡಿ. ರಾಜ್ಯ ಅಭಿವೃದ್ಧಿಯಾಗಬೇಕೇ ಅಥವಾ ಹಾಳಾಗಬೇಕೇ ನೀವೇ ನಿರ್ಧಾರ ಮಾಡಿ ಎಂದು ಗರಂ ಆಗಿದ್ದಾರೆ.

ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ 3,021 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ನಿಂದ 11 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಈ ರೈತರಿಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದೇವೆ. 2017-18-20ನೇ ಸಾಲಿನಲ್ಲಿ ಸಾಲ ಮನ್ನಾಗೆ 25 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಸಿಎಂ ತಿಳಿಸಿದರು.

ydr sala manna

ಸಿಎಂ ಸ್ಪಷ್ಟನೆ:
ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ವರೆಗೆ 13,988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ.

ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎನ್ನುವುದನ್ನೂ ಈ ಮೂಲಕ ಸ್ಪಷ್ಟಪಡಿಸಿದೆ. ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ.

ಏನಿದು ಪ್ರಕರಣ?
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರೊಬ್ಬರ ಖಾತೆಗೆ ಬಂದಿದ್ದ ಸಾಲ ಮನ್ನಾದ ಹಣ, ಹೇಗೆ ಬಂದಿದೆಯೋ ಹಾಗೇ ವಾಪಸ್ ಆಗಿದೆ. ಮುಖ್ಯಮಂತ್ರಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗೆ ಹಣ ಜಮಾ ಆಗಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ರೈತರ ಖಾತೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ.

ಜಿಲ್ಲೆಯ ಸುಮಾರು 200 ರೈತರ ಖಾತೆಯ ಹಣ ರೀಫಂಡ್ ಆಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಶಹಾಪುರದ ಸಗರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದ ಶಿವಪ್ಪ ಅವರಿಗೆ ಏಪ್ರಿಲ್ ತಿಂಗಳಲ್ಲಿ 43,535 ಹಣ ಜಮಾ ಅಗಿತ್ತು. ಮೇ 23ಕ್ಕೆ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರೈತ ಶಿವಪ್ಪ ಅಕೌಂಟ್ ಚೆಕ್ ಮಾಡಿದ ವೇಳೆ ಹಣ ರೀಫಂಡ್ ಅಗಿರುವುದು ಬೆಳಕಿಗೆ ಬಂದಿದೆ.

ydr sala manna 2

ಇದೇ ರೀತಿ 200 ರೈತರ ಹಣ ರೀಫಂಡ್ ಅಗಿದೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಸಗರ ಗ್ರಾಮ ಎಸ್‍ಬಿಐ ಬ್ಯಾಂಕ್ ಅಧಿಕಾರಿಗಳು ಅರ್ಹ ಫಲಾನುಭವಿಗಳ ಪಟ್ಟಿ ಕಳಿಸುವಲ್ಲಿ ಗೊಂದಲವಾಗಿದೆ. ಕೆಲ ರೈತರಿಗೆ ಇರುವ ಸಾಲಕ್ಕಿಂತ ಹೆಚ್ಚಿನ ಹಣ ಅವರ ಖಾತೆಗೆ ಹಣ ಜಮೆ ಅಗಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಹಣ ರೀಫಂಡ್ ಅಗಿದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಶಿವಪ್ಪ, ಫೆ.28 ರಂದು 50 ಸಾವಿರ ಹಣ ಬಂದರೆ, ಏಪ್ರಿಲ್ 17 ರಂದು 43,535 ರೂ. ಹಣ ಜಮೆ ಆಗಿತ್ತು. ಆದರೆ ಮೇ 2 ರಂದು 43,535 ರೀಫಂಡ್ ಆಗಿದೆ. ಮೇ 23 ರಂದು ಮತ್ತೆ 50 ಸಾವಿರ ರೀಫಂಡ್ ಆಗಿದೆ. ಒಟ್ಟಿನಲ್ಲಿ ಜಮೆಯಾಗಿ 93,535 ಹಣ ರೀಫಂಡ್ ಆಗಿದ್ದು, ಬ್ಯಾಂಕ್ ಮ್ಯಾನೇಜರ್ ಅವರನ್ನು ಕೇಳಿದರೆ ರೀಫಂಡ್ ಯಾಕಾಯ್ತು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಮಗೆ ಏನು ಗೊತ್ತಿಲ್ಲ ಕಂದಾಯ ಇಲಾಖೆಯನ್ನು ಕೇಳಿ ಎಂದು ಉತ್ತರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ydr sala manna 1

ಖಾತೆಗೆ ಮೊದಲ ಬಾರಿಗೆ ಜಮೆಯಾದಾಗ ರೈತರು ಹಣ ತೆಗೆಯಲು ಹೋಗಿದ್ದಾರೆ. ಈ ವೇಳೆ ಹಣ ತೆಗೆಯಲು ಮೇಲಿನ ಅಧಿಕಾರಿಗಳಿಂದ ಸೂಚನೆ ಬರಬೇಕು. ಅಧಿಕಾರಿಗಳಿಂದ ಸೂಚನೆ ಬಂದ ನಂತರ ಹಣ ತೆಗೆಯಲು ಅನುಮತಿ ನೀಡಲಾಗುತ್ತದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.

ವರದಿ ಕೇಳಿದ ಸಿಎಂ:
ಸಾಲಮನ್ನಾದ ಹಣ ರೈತರ ಖಾತೆಯಿಂದ ವಾಪಸ್ ಆದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಎಷ್ಟು ಹಣ ವಾಪಸ್ಸಾಗಿದೆ? ಚಾಲ್ತಿ ಸಾಲವೇ ಅಥವಾ ಸುಸ್ತಿ ಸಾಲದ ಹಣವೇ? ಯಾವ ಕಾರಣಕ್ಕೆ ವಾಪಸ್ಸಾಗಿದೆ ಎಂದು ಸರ್ಕಾರ ಮಾಹಿತಿಯನ್ನು ಪಡೆದುಕೊಂಡಿದೆ. ತಕ್ಷಣವೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *