ಹುಬ್ಬಳ್ಳಿ: ಮಹಾರಾಷ್ಟ್ರದ ಮಳೆಯಿಂದಾಗಿ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಬರ ಕಾಣಿಸುತ್ತಿದೆ. ಹೀಗಾಗಿ, ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ (ಬೀಚ್ ಕ್ರಾಫ್ಟ್) ಹುಬ್ಬಳ್ಳಿಗೆ ಬಂದಿಳಿದಿದೆ.
ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆಯ ಈ ತಂತ್ರಜ್ಞಾನ ಹೊಂದಿರುವ ವಿಮಾನ ಗುರುವಾರ ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿದಿತ್ತು. ಗುರುವಾರ ಮಧ್ಯಾಹ್ನ ವಿಶೇಷ ತಂತ್ರಜ್ಞಾನ ಒಳಗೊಂಡ ಮೋಡ ಬಿತ್ತನೆಯ ವಿಮಾನಕ್ಕೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ ಚಾಲನೆ ನೀಡಿದರು.
Advertisement
Advertisement
ಬಳಿಕ ಮಾತನಾಡಿದ ಅವರು, ಗದಗ ಕೇಂದ್ರದಿಂದ 200 ಕಿ.ಮೀ ವ್ಯಾಪ್ತಿಯಲ್ಲಿನ ಮೋಡಗಳಲ್ಲಿ ನೀರಿನ ಸಾಂದ್ರತೆ, ತೇವಾಂಶಗಳನ್ನು ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಾಡಾರ್ ನೀಡಲಿದ್ದು, ವಿಮಾನ ಪೈಲಟ್ ಆ ಮಾಹಿತಿ ಆಧರಿಸಿ ಮೋಡ ಬಿತ್ತನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬಾಗಲಕೋಟೆ, ಗದಗಿನಲ್ಲಿ ಮೋಡಗಳು ಪತ್ತೆಯಾಗಿವೆ ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಹುಬ್ಬಳ್ಳಿ ಏರ್ ಪೋರ್ಟಿನಿಂದ ಮುಂದಿನ 90 ದಿನಗಳ ಕಾಲ ಮೋಡ ಬಿತ್ತನೆ ಆಗಲಿದೆ. ಕಳೆದ ತಿಂಗಳ 25 ರಿಂದ ಮೋಡ ಬಿತ್ತನೆ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರದಿಂದ ಅಧಿಕೃತ ಆದೇಶ ತಡವಾಗಿ ಕೈ ಸೇರಿದ ಕಾರಣ ಬಿತ್ತನೆ ಪ್ರಕ್ರಿಯೆ ಕೊಂಚ ತಡವಾಗಿದೆ. ಈ ನಿಟ್ಟಿನಲ್ಲಿ ಒಂದು ವಿಮಾನ ಈಗಾಗಲೇ ಬಂದಿಳಿದಿದ್ದು ಮತ್ತೊಂದು ಶೀಘ್ರದಲ್ಲೇ ಬರಲಿದೆ.
ರಾಜ್ಯದಲ್ಲಿ ಮೂರು ಕಡೆ ರೆಡಾರ್ಸ್ ಗಳನ್ನು ಅಳವಡಿಸಲಾಗಿದ್ದು, ಬೆಂಗಳೂರು, ಗದಗ ಹಾಗೂ ಯಾದಗಿರಿಯ ಶೋರಾಪುರದಲ್ಲಿ ರೆಡಾರ್ಸ್ ಗಳನ್ನು ಅಳವಡಿಸಲಾಗಿದೆ. ಅವುಗಳ ಸೂಚನೆಯ ಮೇರೆಗೆ ಯಾವ ಭಾಗದಲ್ಲಿ ಮೋಡ ಕಾಣುತ್ತೋ ಅಲ್ಲಿ ಇಂದು ಬಿತ್ತನೆ ಕಾರ್ಯ ನಡೆಯಲಿದೆ.