ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ಸಹ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕೈಗೊಂಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ.
ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವರ್ಷಧಾರೆ ಯೋಜನೆಯಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಮೋಡ ಬಿತ್ತನೆಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಟೇಕ್ ಆಫ್ ಆಗಿದ್ದು, ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
Advertisement
Advertisement
ಕೆಲವೆಡೆ ಮಳೆಯಾದರೂ ಸಹ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ಅಲ್ಲದೆ ಕೆಲ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿತ್ತು. ಹೀಗಾಗಿ ಮೋಡ ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಧಾರವಾಡ ಮತ್ತು ಗದಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
Advertisement
ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆಯಿಂದಾದರೂ ಮಳೆ ಬರುತ್ತಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಮುಂಗಾರು ಮಳೆ ಕೈಕೊಟ್ಟಿದ್ದು, ಕೆಲವೆಡೆ ಮುಂಗಾರು ತಡವಾಗಿ ಆಗಮಿಸಿ ಬೆಳೆಯನ್ನು ನಾಶ ಪಡಿಸಿದೆ. ಹೀಗಾಗಿ ಮೋಡ ಬಿತ್ತನೆಯಿಂದ ಬೆಳೆಗಳಿಗೆ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Advertisement
ಮಣ್ಣಿನಲ್ಲಿರುವ ತೇವಾಂಶ ಕುರಿತು ಉಪಗ್ರಹಗಳು ಕಳುಹಿಸುವ ಚಿತ್ರವನ್ನು ಆಧರಿಸಿ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹಳದಿ ಮತ್ತು ಕಿತ್ತಳೆ ಬಣ್ಣ ಚಿತ್ರಗಳು ಸಿಗುವ ಕಡೆಗಳಲ್ಲಿ ಮಳೆ ಕೊರತೆ ಇದೆ ಎಂದು ಪರಿಗಣಿಸಿ ಅಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ.
ಮೋಡಗಳ ಕೆಳಗೆ ಸಂಚರಿಸುವ ವಿಮಾನ ತಾನು ಹೊತ್ತು ತಂದಿರುವ ಸೋಡಿಯಂ ಕ್ಲೋರೈಡ್ ಮತ್ತು ಪೊಟಾಷಿಯಂ ಕ್ಲೋರೈಡ್ ಮಿಶ್ರಿತ ಹೊಗೆಯನ್ನು ಮೋಡಗಳ ಮೇಲೆ ಚಿಮ್ಮಿಸುತ್ತದೆ. ಆ ಮೋಡ ಕರಗಿ ಮಳೆ ಬರುತ್ತದೆ. ಮೋಡ ಬಿತ್ತನೆಗಾಗಿ ಸರ್ಕಾರ 45 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.