ಮಡಿಕೇರಿ: ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ವಿನೂತನ ಚಿಂತನೆ ನಡೆಸಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಕಟ್ಟಿಕೊಡಲು ತೀರ್ಮಾನಿಸಿದೆ.
ಕೊಡಗು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಗಾಗಲೇ ಜಾಗ ಪರಿಶೀಲನೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿ ನೂರಾರು ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ತ್ವರಿತಗತಿಯಲ್ಲಿ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿದೆ.
Advertisement
Advertisement
ಅನೇಕ ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಸೂರು ಕಲ್ಪಿಸಲು ನಿರ್ಧರಿಸಲಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಷ್ಟು ಪೈಸಾರಿ ಜಾಗ ಒತ್ತುವರಿಯಾಗಿರುವುದು ಕುಂಡುಬಂದಿದ್ದು, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಸರ್ಕಾರ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
Advertisement
Advertisement
ಸಿದ್ದಾಪುರ ಸಮೀಪದಲ್ಲೂ ಸಂತ್ರಸ್ತರಿಗಾಗಿ ಮನೆ ನಿರ್ಮಿಸಲು ಜಾಗವನ್ನು ಪರಿಶೀಲಿಸಲಾಗಿದ್ದು, ಕರಡಿಗೋಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ತೋಟಗಳನ್ನು ತೆರವು ಮಾಡಿ ಲೇಔಟ್ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಂತ್ರಸ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ, ಸಂತ್ರಸ್ತರಿಗೆ ಸೂರು ಕಲ್ಪಿಸಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.