ಹಾಸನ: ಒಂದು ವರ್ಷದ ಹಿಂದೆ ಮಹಾ ಮಜ್ಜನದಿಂದ ಮಿಂದೆದ್ದಿದ್ದ ಜಿಲ್ಲೆಯ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಮಹಾಮೂರ್ತಿಯ ರಾಸಾಯನಿಕ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ವತಿಯಿಂದ ವಿರಾಟ್ ವಿರಾಗಿಗೆ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನ ಹಾಗೂ ಮಹಾ ಮಸ್ತಕಾಭಿಷೇಕದ ಅಂತಿಮ ಬಿಂಬಾಭಿಷೇಕ ನೆರವೇರಿಸಲಾಯಿತು. ಬಾಹುಬಲಿಯ ಸುತ್ತಲೂ ಇರುವ ಅಟ್ಟಣಿಗೆ ಬಿಚ್ಚಿ, ಸಣ್ಣಪುಟ್ಟ ಸ್ವಚ್ಛತಾ ಕಾರ್ಯ ಮುಗಿದರೆ, ಅತಿ ಎತ್ತರದ ಏಕಶಿಲಾ ಮೂರ್ತಿ, ಈಗ ಮೊದಲ ಏಕಾಂತ ಸ್ಥಿತಿಗೆ ಮರಳಿದ್ದಾನೆ.
Advertisement
ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಮಹಾ ಮಸ್ತಕಾಭಿಷೇಕ ನಡೆದು ವರ್ಷ ಕಳೆದಿದೆ.ಲಕ್ಷಾಂತರ ಭಕ್ತರು, ಪ್ರವಾಸಿಗರ ಉಪಸ್ಥಿತಿಯಲ್ಲಿ 2018 ಫೆಬ್ರವರಿ 7 ರಿಂದ 26ರ ವರೆಗೆ ನಡೆದ ಅಂತಾರಾಷ್ಟ್ರೀಯ ಉತ್ಸವ ಮುಗಿದು ಎಂಟು ತಿಂಗಳ ನಂತರ ಮೂರ್ತಿ ಸ್ವಚ್ಚತಾ ಕಾರ್ಯ ಆರಂಭಿಸಲಾಗಿತ್ತು. ಬೃಹನ್ಮೂರ್ತಿಯನ್ನು ವಿವಿಧ ರಾಸಾಯನಿಕಗಳಿಂದ ಸ್ವಚ್ಛಗೊಳಿಸುವ ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ ರಾಸಾಯನಿಕ ವಿಭಾಗ ಆರಂಭಿಸಿತ್ತು. ಇದೀಗ ಇಡೀ ವಿಗ್ರಹವನ್ನು ಸ್ವಚ್ಛಗೊಳಿಸಲಾಗಿದ್ದು, ಸಂಪ್ರದಾಯದಂತೆ ಶ್ರೀ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವೈರಾಗಿಗೆ ಬಿಂಬಾಭಿಷೇಕ ನೆರವೇರಿಸಲಾಯಿತು.
Advertisement
Advertisement
ಶ್ರವಣಬೆಳಗೊಳದ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಮಾರ್ಗದರ್ಶನದಂತೆ ಮಠದ ಪಂಡಿತರು ಪಂಚಕಳಶ ಸ್ಥಾಪಿಸಿ ಪೂಜಿಸಿದರು. ನಂತರ ಶುದ್ಧ ಜಲಕ್ಕೆ ಮಂತ್ರ ಪುರಸ್ಸರವಾಗಿ ಸಂಪ್ರೋಕ್ಷಣೆ ಮಾಡುವ ಮೂಲಕ ಮಹಾ ಮೂರ್ತಿಗೆ ಕೊನೆಯ ಅಭಿಷೇಕ ಮಾಡಿದರು. ಈ ವೇಳೆ ಮಾತನಾಡಿದ ಚಾರುಕೀರ್ತಿ ಸ್ವಾಮೀಜಿ, ಗೊಮ್ಮಟೇಶ್ವರ ಮೂರ್ತಿಯ ಸ್ವಚ್ಛತಾ ಕಾರ್ಯ ಪರಿಪೂರ್ಣಗೊಂಡಿದೆ. ಮಸ್ತಕ ಭಾಗದಿಂದ ಶೀಘ್ರವೇ ಅಟ್ಟಣಿಗೆ ಬಿಚ್ಚುವ ಕಾರ್ಯ ಆರಂಭವಾಗಲಿದೆ. ನಂತರ ಬಾಹುಬಲಿ ಪಾದದ ಸಂರಕ್ಷಣೆ ದೃಷ್ಟಿಯಿಂದ ಕೆಲವು ಲೇಪನಾ ಕಾರ್ಯ ನಡೆಯಲಿದೆ. ಆ ಸಂದರ್ಭದಲ್ಲಿ 15 ದಿನಗಳ ಕಾಲ ಗೊಮ್ಮಟೇಶನ ಪಾದಪೂಜೆ ಇರುವುದಿಲ್ಲ ಎಂದು ತಿಳಿಸಿದರು.
Advertisement
ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಮೂರ್ತಿಯ ಮಸ್ತಕ ಭಾಗದಿಂದ ಸ್ವಚ್ಛತಾ ಕಾರ್ಯ ಈಗ ಸಮಾಪ್ತಿಗೊಂಡಿದೆ. ಅಟ್ಟಣಿಗೆ ತೆರವು ಮಾಡಿದ ನಂತರ, ಬಾಕಿ ಉಳಿದಿರುವ ಶಿಲಾಮೂರ್ತಿಯ ಪಾದ ಹಾಗೂ ಎಡ ಮತ್ತು ಬಲ ಭಾಗದ ಅಲ್ಪ ಸ್ವಲ್ಪ ಕ್ಲೀನಿಂಗ್ ಕಾರ್ಯವನ್ನು ಮುಗಿಸಲಾಗುವುದು. ಒಟ್ಟಿನಲ್ಲಿ ಎಲ್ಲಾ ಕೆಲಸ ಮುಗಿಯಲು ಕನಿಷ್ಟ 1 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಡಿ.ಅಂಬೇಡ್ಕರ್ ತಿಳಿಸಿದ್ದಾರೆ.
ಈ ಎಲ್ಲಾ ಕಾರ್ಯ ಮುಗಿದ ಬಳಿಕ ವಿಂಧ್ಯಗಿರಿಯ ವಿರಾಗಮೂರ್ತಿ ಬಾಹುಬಲಿಯು ಮಳೆ-ಗಾಳಿ-ಬಿಸಿಲಿಗೆ ಮೈಯೊಡ್ಡಿ ಮೊದಲ ಸ್ಥಿತಿಯಲ್ಲಿ ವಿರಾಜಮಾನನಾಗಲಿದ್ದಾನೆ. ನೀರು, ಎಳನೀರು, ಕ್ಷೀರ, ಕಲಚೂರ್ಣ, ಅರಿಶಿನಿ, ಶ್ರೀಗಂಧ ಮೊದಲಾದ ದ್ರವ್ಯಗಳಿಂದ ಅಹಿಂಸಾ ಮೂರ್ತಿ ತೊಯ್ಯುವ ಅಪರೂಪದ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಅಗಣಿತ ಭಕ್ತ ಸಮೂಹ ಮುಂದಿನ 11 ವರ್ಷಗಳ ವರೆಗೆ ಕಾಯಲೇಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv