ಮಂಡ್ಯ: ಜಿಲ್ಲೆಯಲ್ಲಿ ನಡೆದ ಬಸ್ ದುರಂತದಲ್ಲಿ ಮಡಿದ 30 ಜನರ ಕುಟುಂಬದಲ್ಲೀಗ ಬರೀ ನೋವು, ಕಣ್ಣೀರು, ಸಾಯುವ ಮುನ್ನ ಅವರು ಉಳಿಸಿಹೋದ ಒಂದೊಂದು ನೆನಪುಗಳು ಒಂದೊಂದು ಕಥೆಯಾಗಿ ತಮ್ಮವರನ್ನು ಕಾಡುತ್ತಿದ್ದು, ಮನಕಲಕುತ್ತಿದೆ.
ನವೆಂಬರ್ 24 ರಾಜ್ಯದ ಪಾಲಿಗೆ ಅದರಲ್ಲೂ ಮಂಡ್ಯದ ಪಾಲಿಗೆ ಕರಾಳ ದಿನವಾಗಿದೆ. ಒಂದೆಡೆ ಅಂಬಿ ಇಹಲೋಕ ತ್ಯಜಿಸಿದರೆ, ಮತ್ತೊಂದೆಡೆ ಮಂಡ್ಯದ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ ಬರೋಬ್ಬರಿ 30 ಜನ ಜಲಸಮಾಧಿಯಾಗಿದ್ದರು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು, ಪುಟಾಣಿ ಮಕ್ಕಳೆನ್ನದೇ ಯಮರಾಯ ಎಲ್ಲರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು ಬಿಟ್ಟಿದ್ದ.
Advertisement
Advertisement
ದುರಂತದಲ್ಲಿ ಕನಗನಮರಡಿ ಸರ್ಕಾರಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಕೂಡ ಮೃತಪಟ್ಟಿದ್ದರು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೃತ ವಿದ್ಯಾರ್ಥಿಗಳಿಗೆ ಸಂತಾಪ ಸಲ್ಲಿಸಿದ್ದರು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ನೆನೆದು ಕಣ್ಣೀರಿಟ್ಟರು.
Advertisement
Advertisement
ದುರಂತದಲ್ಲಿ ಮಡಿದ 30 ಜನರ ಕುಟುಂಬದಲ್ಲೂ ಈಗ ನೀರವ ಮೌನ ದುಃಖ ಮಡುಗಟ್ಟಿದೆ. ಅದರಲ್ಲೂ ವದೇಸಮುದ್ರ ಗ್ರಾಮವೊಂದರಲ್ಲೇ ಎಂಟು ಜನ ಮೃತಪಟ್ಟಿದ್ದು, ಅವರನ್ನೆಲ್ಲ ಒಂದೇ ಜಾಗದಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗಿದೆ. ದುರಂತದ ನಂತರ ಎಚ್ಚತ್ತಿರುವ ಸಾರಿಗೆ ಇಲಾಖೆ ದುರಂತ ನಡೆದ ಮಾರ್ಗದಲ್ಲಿ ಸಂಚರಿಸಲು ಎರಡು ಸರ್ಕಾರಿ ಬಸ್ ಬಿಟ್ಟಿದೆ.
ದುರಂತದ ಮನೆಯಲ್ಲೀಗ ಬರೀ ಕಣ್ಣೀರು ನೋವು ಮಾತ್ರ ತುಂಬಿದೆ. ಇನ್ಮುಂದೆಯಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತು ಕಟ್ಟುನಿಟ್ಟಿನ ಕಾನೂನು ರೂಪಿಸಿ ಅಮಾಯಕರ ಜೀವ ಬಲಿಯಾಗದಂತೆ ನೋಡಿಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv