ಚೆನ್ನೈ: 9 ನೇ ತರಗತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಎಲೆಕ್ಟ್ರಿಷಿಯನ್ ಸೇರಿ ನಾಲ್ವರನ್ನು ಚೆನ್ನೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಘಟನೆ ಡಿಸೆಂಬರ್ 1ರಂದು ಮರೀನಾ ಬೀಚ್‍ಗೆ ಸಂತ್ರಸ್ತೆ ಹೋಗಿದ್ದಾಗ ನಡೆದಿದೆ. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪಿಗಳನ್ನು ಅನ್ಬಾಜಗನ್, ಪುಷ್‍ಪ್ರಾಜ್, ಆನಂದ್ ಮತ್ತು ವಿಕ್ಕಿ ಎಂದು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಆರೋಪಿ ಅನ್ಬಾಜಗನ್ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸಿದ್ದು, ಅವಳನ್ನು ತನ್ನ ಎಲೆಕ್ಟ್ರಿಷಿಯನ್ ಅಂಗಡಿಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಪೊಲೀಸರ ತನಿಖೆ ಪ್ರಕಾರ ಆರೋಪಿಗಳು ಸಂತ್ರಸ್ತೆಯನ್ನು ನಾಲ್ಕು ವಿವಿಧ ಸ್ಥಳಗಳಲ್ಲಿ ಆತ್ಯಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯನ್ನು ಚೆನ್ನೈ ಎಗ್ಮೋರ್ ರೈಲ್ವೆ ನಿಲ್ದಾಣದಿಂದ ಮಕ್ಕಳ ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದರು. ಆರೋಪಿ ಎಲೆಕ್ಟ್ರಿಷಿಯನ್ ಅನ್ಬಾಜಗನ್ ವಿರುಧಾಚಲಂ ನಿವಾಸಿಯಾಗಿದ್ದು, ಬಾಲಕಿಯನ್ನು ವಿರುಧಾಚಲಂಗೆ ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಅನ್ಬಾಜಗನ್ ಮತ್ತು ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವರ್ಷದ ಏಪ್ರಿಲ್ ನಲ್ಲಿಯೂ ಮನೆ ಮುಂದೆ ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಆರೋಪಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಘಟನೆ ಚೆನ್ನೈನ ಕವಲನ್ ಗೇಟ್ ಬಳಿ ನಡೆದಿತ್ತು. ಹೋಟೆಲ್ ಒಂದರಲ್ಲಿ ಕೆಲಸ ಮಾಡುವಾತ ಬಾಲಕಿಯನ್ನು ಅತ್ಯಾಚಾರ ಮಾಡಿ ನಂತರ ಬಾಲಕಿಯನ್ನು ತಂದು ಮನೆಯ ಬಳಿ ಬಿಟ್ಟು ಹೋಗಿದ್ದ.
ಮನೆಗೆ ಬಂದ ಬಾಲಕಿಯನ್ನು ತಾಯಿ ಮಾತನಾಡಿಸಿದಾಗ ಸಂತ್ರಸ್ತೆ ಸರಿಯಾಗಿ ಮಾತನಾಡಿರಲಿಲ್ಲ. ಅಲ್ಲದೇ ಆಕೆ ತುಂಬಾ ಸುಸ್ತಾದ್ದಂತೆ ಕಾಣಿಸಿದ್ದಳು. ಬಾಲಕಿ ಮೈಮೇಲೆ ಆಗಿರುವ ಗಾಯಗಳನ್ನು ನೋಡಿ ತಾಯಿ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು.