ಬೆಳಗಾವಿ: ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಬಿದ್ದಿರುವ ಮನೆ, ಹಾನಿಯಾದ ಜಮೀನಿನ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕಿದ್ದ ಗ್ರಾಮ ಲೆಕ್ಕಾಧಿಕಾರಿ ಸೇವೆಗೆ ಗೈರು ಹಾಜರಿಯಾಗಿದ್ದು, ಈ ಸ್ಥಾನದಲ್ಲಿ 13 ವರ್ಷದ ಬಾಲಕಿಯನ್ನು ತಂದು ಕೂರಿಸಿ ಕೆಲಸ ಮಾಡಿಸಿಕೊಳ್ಳುತ್ತಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ನಡೆದಿದೆ.
ದೊಡವಾಡ ಪಂಚಾಯಿತಿ ಕಚೇರಿಯಲ್ಲಿ ಕುಳಿತ ಬಾಲಕಿ ಗ್ರಾಮಸ್ಥರಿಂದ ಕಾಗದ ಪಾತ್ರಗಳನ್ನು ಪಡೆದು, ಮಳೆಯಿಂದ ಉಂಟಾಗಿದ್ದ ನಷ್ಟ ಪ್ರಮಾಣವನ್ನು ಸರ್ಕಾರಿ ಕಚೇರಿ ಪುಸ್ತಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಳು. ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದ ವೇಳೆ ನಮ್ಮ ಮಾವನವರಿಗೆ ಅನಾರೋಗ್ಯವಾಗಿದ್ದು, ಅವರ ಸಲುವಾಗಿ ಕಚೇರಿಗೆ ಬಂದಿದ್ದೇನೆ. ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಆದರೆ ಯಾವುದೋ ಮೀಟಿಂಗ್ ಇದೇ ಎಂದು ತೆರಳಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ.
ಮಾಧ್ಯಮಗಳಲ್ಲಿ ಈ ಕುರಿತ ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಗ್ರಾಮಪಂಚಾಯಿತಿ ಅಧಿಕಾರಿಗಳು ಬಾಲಕಿಯನ್ನು ಕಚೇರಿಯಿಂದ ಹೊರ ಕಳುಹಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಬಾಲಕಿ ಯಾರು? ಆಕೆಗೆ ಯಾರು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದರು. ಅಲ್ಲದೇ ಬಾಲಕಿ ಹೇಳಿದ್ದ ಆಕೆಯ ಮಾವ ಯಾರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.
ಸರ್ಕಾರಿ ಅಧಿಕಾರಿಗಳು ನೆರೆಯಿಂದ ಸಮಸ್ಯೆ ಎದುರಿಸಿದ್ದ ಜನರಿಂದ ಸೂಕ್ತ ಮಾಹಿತಿ ಪಡೆದು ತ್ವರಿತ ಪರಿಹಾರ ನೀಡುವಂತಹ ಕಾರ್ಯ ಮಾಡಬೇಕಿದೆ. ಆದರೆ ಅಧಿಕಾರಿಗಳೇ ಮಾಹಿತಿ ಸಂಗ್ರಹಿಸಲು ಅಸಡ್ಡೆ ತೋರಿಸಿ ಬಾಲಕಿ ಕೈಯಿಂದ ಇಂತಹ ಕೆಲಸ ಮಾಡಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.