ಜೈಪುರ: ಶಾಲೆಯ 4ನೇ ಮಹಡಿಯಿಂದ ಬಿದ್ದು 9ರ ಬಾಲಕಿ ಸಾವನ್ನಪ್ಪಿರುವ ಘಟನೆ ಜೈಪುರದ (Jaipur) ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಅಮೈರಾ ಎಂದು ಗುರುತಿಸಲಾಗಿದ್ದು, ಅದೇ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಬೆಂಗ್ಳೂರಲ್ಲಿ ಬೀದಿನಾಯಿ ಮೇಲೆ ಗ್ಯಾಂಗ್‌ರೇಪ್ ಕೇಸ್ – 25 ಸಿಸಿಟಿವಿ ಪರಿಶೀಲಿಸಿ ನಾಯಿ ಪತ್ತೆ
ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ 4ನೇ ಮಹಡಿಯ ಗ್ರಿಲ್ ಹತ್ತಿ, ಕೆಳಗೆ ಹಾರಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 47 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾಳೆ. ಕೆಳಗೆ ಬಿದ್ದ ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ರವಾನಿಸಿದರೂ ಕೂಡ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ, ಇದನ್ನು ಆತ್ಮಹತ್ಯೆ ಎನ್ನಲಾಗಿದ್ದು, ಆದರೆ ನಿಖರ ಕಾರಣ ತಿಳಿದುಬರಬೇಕಿದೆ. ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಬಾಲಕಿ ಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಲಾಗಿತ್ತು. ಯಾವುದೇ ರಕ್ತದ ಕಲೆ ಉಳಿಯದಂತೆ ಶುಚಿಗೊಳಿಸಿದ್ದರು ಎಂದು ತಿಳಿಸಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಶಾಲಾ ಆವರಣದಲ್ಲಿ ಈ ರೀತಿಯ ಘಟನೆ ನಡೆಯಲು ಹೇಗೆ ಸಾಧ್ಯ? ಸಿಬ್ಬಂದಿ ಹಾಗೂ ಶಿಕ್ಷಕರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ, ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಮೌನವಹಿಸಿದೆ.
ಮೃತ ಬಾಲಕಿಯ ತಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಅಮೈರಾ ಪೋಷಕರ ಒಬ್ಬಳೇ ಮಗಳಾಗಿದ್ದಳು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಪುತ್ತೂರಿನಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ; 4 ವರ್ಷದ ಮಗು ಸಾವು

