ಶ್ರೀನಗರ: ಸಿಆರ್ ಪಿಎಫ್ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿ, ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಉಗ್ರರ ಪೈಕಿ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯ ಮಗ ಕೂಡ ಭಾಗಿಯಾಗಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪಾಕ್ ಮೂಲದ ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಉಗ್ರರ ದಾಳಿಗೆ ಪ್ರತೀಕಾರವಾಗಿ ಸೇನೆ ತಕ್ಷಣವೇ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆಗಿಳಿದು, ದಾಳಿಕೋರ ಮೂವರು ಉಗ್ರರನ್ನು ಸದೆಬಡಿದಿತ್ತು. ಇದೀಗ ಹತರಾದ ಇಬ್ಬರು ಉಗ್ರರ ಗುರುತನ್ನು ಯೋಧರು ಪತ್ತೆ ಹಚ್ಚಿದ್ದಾರೆ.
Advertisement
Advertisement
ಪುಲ್ವಾಮಾದ ಸ್ಥಳೀಯ ನಿವಾಸಿಗಳಾದ ಫರ್ದೀನ್ ಅಹ್ಮದ್ ಖಾಂಡ್ಯಾ (17), ಮಂಜೂರ್ ಬಾಬಾ (22) ಎನ್ನುವವರು ಸೇನಾ ಕಾರ್ಯಾಚರಣೆ ವೇಳೆ ಹತರಾದ ಉಗ್ರರಾಗಿದ್ದಾರೆ. ಇವರಲ್ಲಿ ಫರ್ದೀನ್ ಅಹ್ಮದ್ ಖಾಂಡ್ಯಾ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇವನು ಕಾಶ್ಮೀರ ಪೊಲೀಸ್ ಪೇದೆಯೊಬ್ಬರ ಮಗ ಎಂದು ತಿಳಿದುಬಂದಿದೆ. ಇನ್ನು ಅಹ್ಮದ್ ಖಾಂಡ್ಯಾ ಟ್ರಾಲ್ ಪ್ರದೇಶ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿದೆ.
Advertisement
ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಉಗ್ರರು ಪುಲ್ವಾಮ ಜಿಲ್ಲೆಯ ಅವಂತಿಪೋರ್‍ನ ಸಿಆರ್ ಪಿಎಫ್ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದರು. ಇದರಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಹಲವು ಯೋಧರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
4 ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ಜೈಷ್ ಉಗ್ರ ನೂರ್ ಮಹಮ್ಮದ್ ತಂತ್ರೇನನ್ನು ಎನ್‍ಕೌಂಟರ್ ಮಾಡಲಾಗಿತ್ತು. ನವೆಂಬರ್ ನಲ್ಲಿ ಇದೇ ತಂಡದ ಮೂವರು ಉಗ್ರರನನ್ನು ಹತ್ಯೆ ಮಾಡಲಾಗಿತ್ತು. ಅವರಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಸಝರ್ ನ ಸಂಬಂಧಿಯೂ ಒಬ್ಬನಾಗಿದ್ದ.
ಸಿಆರ್ ಪಿಎಫ್ ತರಬೇತಿ ಕೇಂದ್ರದ 185ನೇ ಬೆಟಾಲಿಯನ್‍ನ ಆವರಣದೊಳಗೆ ನುಗ್ಗುವ ಮುನ್ನ ಗ್ರೆನೇಡ್ ಎಸೆದು ಗುಂಡಿನ ದಾಳಿ ಆರಂಭಿಸಿದ್ದ ಉಗ್ರರ ಬಳಿ ಅಪಾರ ಪ್ರಮಾಣದ ಆಧುನಿಕ ಆಯುಧಗಳಿದ್ದವು ಎಂದು ತಿಳಿದು ಬಂದಿದೆ. ಇನ್ನು ಭಾರತೀಯ ಯೋಧರ ಶೂಟೌಟ್‍ನ ಆರಂಭಿಕ ಗಂಟೆಗಳಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಶರೀಫ್ ಉದ್ ದಿನ್ ಗನಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ಎನ್‍ಕೌಂಟರ್ ನಲ್ಲಿ ಯೋಧರಾದ ರಾಜೇಂದ್ರ ನೇನ್, ಪಿಕೆ ಪಾಂಡಾ ಬಲಿಯಾಗಿದ್ದರು. ಕಟ್ಟಡದೊಳಗೆ ಸಿಲುಕಿದ್ದ ಅಧಿಕಾರಿ ಕುಲ್‍ದೀಪ್ ರೈ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಉಗ್ರರು ಸಿಆರ್ ಪಿಎಫ್ ಕೇಂದ್ರವನ್ನು ಟಾರ್ಗೆಟ್ ಮಾಡಿದ್ದಾರೆಂಬ ಎಚ್ಚರಿಕೆಯ ಮಧ್ಯೆಯೂ ಈ ದಾಳಿ ನಡೆಸಿದೆ. ದಾಳಿ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.