ಹೈದರಾಬಾದ್: ಶಾಲಾ ಬಸ್ ನಿಂದ ಬಿದ್ದು 1ನೇ ತರಗತಿಯ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಈ ಘಟನೆ ಸಾಹೇಬ್ ನಗರದಲ್ಲಿರೋ ವಸಂತಲಿಪುರಂನಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ.
ಏನಿದು ಘಟನೆ?: ಮೃತ ಅಂಜಲಿ ಮನೆ ಶಾಹೇಬ್ ನಗರದಲ್ಲಿತ್ತು. ಈಕೆ ಪ್ರತೀ ದಿನ ಶಾಲೆಗೆ ಶಾಲಾ ಬಸ್ ನಲ್ಲೇ ಹೋಗಿ ಬರುತ್ತಿದ್ದಳು. ಅಂತೆಯೇ ಇಂದು ಕೂಡ ವಸಂತಪುರಂನಲ್ಲಿರೋ ಪ್ರಶಾಂತಿ ವಿದ್ಯಾನಿಕೇತನ್ ಶಾಲೆಗೆ ತೆರಳಿ ಮತ್ತೆ ಬಸ್ ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಳು. ಈ ವೇಳೆ ಬಸ್ ನ ಡೋರ್ ಪಕ್ಕ ಅಂಜಲಿ ಕುಳಿತಿದ್ದಳು. ಅಂತೆಯೇ ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಸ್ಪೀಡ್ ಬ್ರೇಕರ್ ನೋಡಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಾಲಕಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಚಕ್ರದಡಿ ಸಿಲುಕಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಸದ್ಯ ಬಾಲಕಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ನಾವು ಇಂದು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ.
ಕೆಲ ಖಾಸಗಿ ಶಾಲೆಯ ಬಸ್ ಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಅಲ್ಲದೇ ಪೋಷಕರಿಂದ ಭಾರೀ ಶುಲ್ಕ ಪಡೆದುಕೊಳ್ಳುತ್ತಾರೆ. ಆದ್ರೆ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿಲ್ಲ. ಈ ಎಲ್ಲಾ ಹಿನ್ನೆಲೆಗಳಿಂದ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದಾಗಿ ವರದಿಯಾಗಿದೆ.
ಸದ್ಯ ಘಟನೆ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.