- ಗಲಾಟೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆ
ಹಾಸನ: ನಗರದಲ್ಲಿ (Hassan) ಹೋಳಿ (Holi) ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ.
ಹಾಸನ ನಗರದ ಜಿಲ್ಲಾಸ್ಪತ್ರೆ ಬಳಿ ಮಾ.8 ರಂದು ಈ ಘಟನೆ ನಡೆದಿದೆ. ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಿಎಂ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಹೋಳಿ ಸಂಭ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಯುವಕ ಪ್ರಜ್ವಲ್ ಎಂಬಾತನ ಮೇಲೆ ಗುಂಪೊಂದು ಹಲ್ಲೆ ಮಾಡಿದೆ.
ಗಾಯಗೊಂಡ ಪ್ರಜ್ವಲ್ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸುದ್ದಿ ತಿಳಿದು ಪ್ರಜ್ವಲ್‌ನನ್ನು ನೋಡಲು ಆಸ್ಪತ್ರೆಗೆ ಚನ್ನರಾಯಪಟ್ಟಣ ಮೂಲದ ಚಂದನ್ ಕುಮಾರ್ ಆಗಮಿಸಿದ್ದ. ಈ ವೇಳೆ ಅದೇ ಪುಂಡರ ಗುಂಪು ಆತನ ಮೇಲೂ ಹಲ್ಲೆ ಮಾಡಿದೆ. ಚಂದನ್ ಕೆಳಗೆ ಬಿದ್ದರೂ ಬಿಡದೆ ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಾಯಿಗೆ ಬಂದಂತೆ ನಿಂದಿಸಿ ಕಾಲಿನಿಂದ ಒದ್ದಿದ್ದಾರೆ. ಚಂದನ್ ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.
ಚಂದನ್ ದೂರು ಆಧರಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೊಳಗಾದ ಯುವಕರು ಹೋಳಿ ಆಚರಣೆ ಸಲುವಾಗಿ ಚನ್ನರಾಯಪಟ್ಟಣದಿಂದ ಆಗಮಿಸಿದ್ದರು ಎನ್ನಲಾಗಿದೆ. ಚನ್ನರಾಯಪಟ್ಟಣ ಮೂಲದ ಲೋಹಿತ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಯಾವ ಕಾರಣಕ್ಕೆ ಈ ಹೊಡೆದಾಟ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.