ಹಾವೇರಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಎಪಿಎಂಸಿ ವೇಬ್ರಿಡ್ಜ್ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನ ಉಮೇಶ್ ಶಿವಜೋಗಿಮಠ(40) ಎಂದು ಗುರುತಿಸಲಾಗಿದೆ. ಕಾರವಾರ ಜಿಲ್ಲೆ ಮುಂಡಗೋಡ ಮೂಲದವರಾದ ಉಮೇಶ್ ಅವರು ಕಳೆದ ಕೆಲವು ವರ್ಷಗಳಿಂದ ಹಾವೇರಿಯ ಎಪಿಎಂಸಿ ಬಳಿ ಗ್ಯಾರೇಜ್ ಇಟ್ಟುಕೊಂಡಿದ್ದರು. ಇದರ ಜೊತೆಗೆ ಅವರು ಟಿಪ್ಪರ್ ಕೂಡ ಓಡಿಸುತ್ತಿದ್ದರು. ಗ್ಯಾರೇಜ್ ಸಮೀಪದ ವೇಬ್ರಿಡ್ಜ್ ಬಳಿ ಟಿಪ್ಪರ್ ನಿಂತಿರುತ್ತಿತ್ತು. ಇದನ್ನೂ ಓದಿ: ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಸೊಗಡು ಶಿವಣ್ಣ
ನಡೆದಿದ್ದೇನು?
ಸಂಜೆ ಸುಮಾರಿಗೆ ಟಿಪ್ಪರ್ ನಿಂತಿದ್ದ ಜಾಗದ ಬಳಿ ಕೆಲವೊಂದಿಷ್ಟು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಆಟದ ವೇಳೆ ಚಿನ್ನಿ ಬಂದು ಟಿಪ್ಪರ್‌ಗೆ ಬಡಿದಿತ್ತು. ನಂತರ ಉಮೇಶ್ ಮತ್ತು ಚಿನ್ನಿದಾಂಡು ಆಡುತ್ತಿದ್ದವರ ನಡುವೆ ಜಗಳ ಶುರುವಾಗಿದೆ. ಆಗ ಐದಾರು ಜನರು ಬಂದು ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಉಮೇಶ್ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಉಮೇಶ್ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಶಿಗ್ಗಾಂವಿ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಉಮೇಶ್ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದು, ಮೃತ ಸುದ್ದಿ ತಿಳಿದು ಕಣ್ಣೀರು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಮುಂದೆಯೇ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್
ಮೃತನ ಸಹೋದರ ಈ ಕುರಿತು ಮಾತನಾಡಿದ್ದು, ಉಮೇಶ್ ಒಳ್ಳೆಯ ವ್ಯಕ್ತಿಯಾಗಿದ್ದ. ಯಾರೊಂದಿಗೂ ದ್ವೇಷ ಭಾವನೆ ಹೊಂದಿರಲಿಲ್ಲ. ಆದರೆ ಅವರನ್ನು ಕೊಲೆ ಮಾಡಿರುವುದು ನಿಜಕ್ಕೂ ಆಘಾತ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.