ಮಾರಾಟ ಮಾಡಿದ ಮನೆ ಖಾಲಿ ಮಾಡದ್ದಕ್ಕೆ ಬಾವನನ್ನೇ ಹತ್ಯೆಗೈದ ಬಾಮೈದ!

Public TV
1 Min Read
CHIKKAMAGALURU MURDER CASE

ಚಿಕ್ಕಮಗಳೂರು: ಮನೆ ಮಾರಾಟ ಮಾಡಿ ಮೂರು ವರ್ಷಗಳಾಗಿದ್ದರೂ ಮನೆ ಖಾಲಿ ಮಾಡದ ಬಾವನನ್ನ ಬಾಮೈದನೇ ಕೊಲೆ ಮಾಡಿರುವ ಘಟನೆ ನಗರದ (Chikkamagaluru) ತಮಿಳು ಕಾಲೋನಿಯಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮಂಜು (50) ಎಂದು ಗುರುತಿಸಲಾಗಿದೆ. ಮೃತ ಮಂಜು ಬಾಮೈದ ಗೋಪಾಲ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.

ಮಂಜು ಹಾಗೂ ಗೋಪಾಲ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ಮೃತ ಮಂಜು ತನ್ನ ಮನೆಯನ್ನ 25 ಸಾವಿರ ರೂ.ಗೆ ಬಾಮೈದ ಗೋಪಾಲ್‌ಗೆ ಮಾರಿದ್ದನು. ಮನೆ ಮಾರಾಟ ಮಾಡಿಯೂ, 3 ವರ್ಷಗಳಿಂದ ಮನೆಯನ್ನು ಖಾಲಿ ಮಾಡಿರಲಿಲ್ಲ. ಮನೆ ಖಾಲಿ ಮಾಡುವಂತೆ ಸಾಕಷ್ಟು ಬಾರಿ ಆರೋಪಿ ಎಚ್ಚರಿಕೆ ನೀಡಿದ್ದ.

ಇದೇ ವಿಚಾರಕ್ಕೆ ಆಗಾಗ ಇಬ್ಬರಿಗೂ ಗಲಾಟೆಯಾಗುತ್ತಿತ್ತು. ಇಂದು (ಮಂಗಳವಾರ) ಸಹ ಮಾತಿಗೆ ಮಾತು ಬೆಳೆದು ಜಗಳವಾಗಿದೆ.‌ ಈ ವೇಳೆ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಗೋಪಾಲ್ ಬಾವ ಮಂಜು ತಲೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗುತ್ತಿದ್ದ ಮಂಜುನನ್ನ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು (Police) ಆರೋಪಿ ಗೋಪಾಲ್‌ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share This Article