ಚಿತ್ರದುರ್ಗ: ಸೋಮವಾರ ನಡೆದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಸತ್ಯಭಾಮಾ ನಡುವೆ ನಡೆದ ಜಟಾಪಟಿ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಸಿಇಓ ಸತ್ಯಭಾಮಾರ ಪರವಾಗಿ ಕಾಡುಗೊಲ್ಲ ಸಮಾಜ ಮುಖಂಡರು ಬ್ಯಾಟಿಂಗ್ ಮಾಡಿದ್ದು, ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲು ಚರ್ಚೆ ನಡೆಸುತ್ತಿದ್ದಾರೆ. ಕಾಡುಗೊಲ್ಲ ಸಮಾಜ ಮುಖಂಡರ ಪ್ರತಿಭಟನೆಯ ವಿಷಯ ತಿಳಿದ ಸಿಇಓ ಸತ್ಯಭಾಮಾ, ವೃತ್ತಿ ಜೀವನದಲ್ಲಿ ಇಂಥ ಸವಾಲು ಎದುರಿಸಿದ್ದೇನೆ. ಸರ್ಕಾರಿ ಕೆಲಸದಲ್ಲಿ ಇಂತಹ ವ್ಯಕ್ತಿಗಳನ್ನು ನೋಡಿದ್ದೇನೆ. ನಾನು ಐಎಎಸ್ ಕೇಡರ್ ಅಧಿಕಾರಿಯಾಗಿದ್ದು, ಶಾಸಕರು, ಅವರ ಬೆಂಬಲಿಗರಿಗೆ ಪ್ರೋತ್ಸಾಹಿಸಲ್ಲ. ಹಾಗಾಗಿ ಪ್ರತಿಭಟನೆಯ ಅಗತ್ಯವಿಲ್ಲ ಎಂದು ವಾಟ್ಸಪ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
Advertisement
Advertisement
ಸೋಮವಾರ ನಡೆದಿದ್ದೇನು?
ಸೋಮವಾರ ಚಿತ್ರದುರ್ಗ ತಾಲೂಕಿನ ಸೋಲಾಪುರ, ಮಾರಘಟ್ಟ ಹಾಗೂ ಬಳ್ಳೆಕಟ್ಟೆ ಗ್ರಾಮಸ್ಥರು ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾ ಪಂಚಾಯತ್ ಕಚೇರಿಗೆ ಖಾಲಿ ಕೊಡ ಹಿಡಿದು ಮುತ್ತಿಗೆ ಹಾಕಿದ್ದರು. ಈ ವೇಳೆ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಕೂಡ ಕ್ಷೇತ್ರದ ಜನರ ಹೋರಾಟಕ್ಕೆ ಸಾಥ್ ನೀಡಿ, ಸಿಇಓ ಸತ್ಯಭಾಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
Advertisement
ಮಾತಿನ ಗಲಾಟೆಯಲ್ಲಿ ಶಾಸಕರು, ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಸಭೆ ನಡೆಸುವ ಹಾಗಿಲ್ಲ. ಇಲ್ಲ ಅಂದ್ರೆ ನಿಮ್ಮನ್ನ ಚಾರ್ಜ್ ಮಾಡುತ್ತಿದ್ದೆ ಎಂದರು. ಶಾಸಕರ ಮಾತಿಗೆ ಗರಂ ಆದ ಸತ್ಯಭಾಮಾ, ಯಾರು ಯಾರನ್ನ ಏನು ಚಾರ್ಜ್ ಮಾಡೋದು. ನಮ್ಮ ಡ್ಯೂಟಿಯನ್ನು ನಾವು ಮಾಡುತ್ತಿದ್ದೇವೆ. ನೀತಿ ಸಂಹಿತೆ ಜಾರಿಯಲ್ಲಿ ಇರೋವಾಗ ಕಚೇರಿಯಲ್ಲಿ ಇರಲ್ಲ ಎಂದು ಆರೋಪಿಸಿದರು. ಬೆಂಗಳೂರಿನ ಸಭೆಗೆ ತೆರಳಿದ್ದೆ ಎಂದು ಸಿಇಓ ಸಮಜಾಯಿಷಿ ನೀಡಿದರು.
Advertisement
ಶಾಸಕರು ಹೇಳೋದೇನು?
ಕಚೇರಿಯಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಕ್ಷೇತ್ರದ ಜನರು ಎಲ್ಲಿಂದ ಆದ್ರೂ ನಮಗೆ ನೀರು ಕೊಡಿ. ಯಾವ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಕೆಲವು ಗ್ರಾಮಗಳಿಗೆ ತಿಂಗಳಿಗೆ ಒಂದು ಟ್ಯಾಂಕರ್ ನೀರು ಪೂರೈಸುತ್ತಿಲ್ಲ. ನನ್ನ 25 ವರ್ಷದ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಗೆ ಕಚೇರಿಗೆ ಬಂದು ಮಾತನಾಡಬೇಕಾಯ್ತು. ಸಿಇಓ ತಾವೇ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. ಜಿಲ್ಲೆಯ ಅರ್ಧ ಹಳ್ಳಿಗಳಲ್ಲಿ ಈ ಸಮಸ್ಯೆಗಳಿವೆ. ಯಾವ ಗ್ರಾಮಕ್ಕೆ ಭೇಟಿ ನೀಡ್ತಾರೆ ಎಂಬುವುದು ಗೊತ್ತಿಲ್ಲ. ನಮಗೆ ವಾದ-ವಿವಾದ, ರಾಜಕೀಯ ಬೇಕಿಲ್ಲ. ಕೂಡಲೇ ಗ್ರಾಮಸ್ಥರ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ತಿಳಿಸಿದ್ದೇನೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಕಚೇರಿಯಲ್ಲಿ ನಡೆದ ಘಟನೆ ಬಳಿಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿ ಸಿಇಓ ಹೊರನಡೆದಿದ್ದರು. ಕಚೇರಿಯಿಂದ ನೇರವಾಗಿ ಮನೆಗೆ ತೆರಳಿದ ಅಧಿಕಾರಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.