ಬೆಂಗಳೂರು: ಕೈದಿಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.
ಆನಂದ್ ಹಾಗೂ ಹುಸೇನ್ ಇಬ್ಬರು ಗಾಯಗೊಂಡಿರುವ ಕೈದಿಗಳಾಗಿದ್ದು, ಸೂರ್ಯಪ್ರಕಾಶ್ (24) ಹಲ್ಲೆ ಮಾಡಿರುವ ವಿಚಾರಣಾದೀನ ಕೈದಿ ಆಗಿದ್ದಾನೆ. ಈ ಘಟನೆ ಬುಧವಾರ ನಡೆದಿದೆ.
ಮಧ್ಯಾಹ್ನ ಊಟದ ವೇಳೆ ಸೂರ್ಯ ಪ್ರಕಾಶ್ ಹಾಗೂ ಆನಂದ ನಡುವೆ ಸಣ್ಣ ಕಾರಣಕ್ಕೆ ಜಗಳ ಶುರುವಾಗಿದೆ. ಆ ಸಮಯದಲ್ಲಿ ಸೂರ್ಯಪ್ರಕಾಶ್ ಸಮೀಪದ ಬಾತ್ರೂಮ್‌ನಲ್ಲಿ ಅಳವಡಿಸಿದ್ದ ಟೈಲ್ಸ್ ತೆಗೆದುಕೊಂಡು ಆನಂದ್ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಹೊಡೆದಾಟ ಬಿಡಿಸಲು ಬಂದಿದ್ದ ಮತ್ತೊಬ್ಬ ಕೈದಿ ಹುಸೇನ್ ಎಂಬಾತನ ಮೇಲೆ ಕೂಡ ಟೈಲ್ಸ್‌ನಿಂದ ಹಲ್ಲೆ ಮಾಡಿದ್ದು, ಸದ್ಯ ಆನಂದ್‌ಗೆ ಗಂಭೀರ ಗಾಯಗಳಾಗಿವೆ.
ಹುಸೇನ್‌ನನ್ನು ಜೈಲಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಆನಂದ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಜೈಲಿನ ಉಪ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ನೀಡಿರುವ ದೂರಿನ ಅನ್ವಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸೂರ್ಯಪ್ರಕಾಶ್‌ನನ್ನು ವಶಕ್ಕೆ ಪಡೆದು ತನಿಖೆ ಮಾಡುವ ಸಾಧ್ಯತೆ ಇದೆ.