Chikkaballapur
ಕೈ ಕೈ ಮಿಲಾಯಿಸಿದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳ ಮುಸುಕಿನ ಗುದ್ದಾಟಗಳು ಬೀದಿಗೆ ಬರತೊಡಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಕಾಂಗ್ರೆಸ್‍ನ ಎಂ.ಸಿ.ಸುಧಾಕರ್ ಬೆಂಬಲಿಗರು ಇಂದು ಕೈ ಕೈ ಮಿಲಾಯಿಸಿದ್ದಾರೆ.
ಚಿಂತಾಮಣಿ ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್‍ನ ತಾ.ಪಂ. ಅಧ್ಯಕ್ಷೆ ಶಾಂತಮ್ಮಾ ಅವರು ಜೆಡಿಎಸ್ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಅಂತ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಪ್ರಗತಿ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿದರು.
ಚಿಂತಾಮಣಿ ತಾಲೂಕು ಪಂಚಾಯತಿ ಕಾಂಗ್ರೆಸ್ ಪಕ್ಷದ ವಶದಲ್ಲಿದೆ. ಜೆಡಿಎಸ್ ಸದಸ್ಯರು ಸಭೆಯಿಂದ ಹೊರಬಂದು ಪ್ರತಿಭಟನಾ ಧರಣಿ ನಡೆಸಲು ಆರಂಭಿಸಿದರು. ಈ ವೇಳೆ ಅಧ್ಯಕ್ಷೆ ಶಾಂತಮ್ಮ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತರ ವರ್ತನೆಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ದಿಕ್ಕಾರ ಕೂಗಲು ಆರಂಭಿಸಿದರು.
ಈ ವೇಳೆ ಪರಸ್ಪರರು ಶಾಸಕ ಹಾಗೂ ಮಾಜಿ ಶಾಸಕ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಒಬ್ಬರ ಮೇಲೊಬ್ಬರು ಹಲ್ಲೆಗೆ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಚಿಂತಾಮಣಿ ನಗರದಲ್ಲಿ ಎರಡು ಪಕ್ಷಗಳ ಕಿತ್ತಾಟದಿಂದ ಬಿಗುವಿನ ವಾತಾವರಣನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಕೊಳ್ಳಲಾಗಿದೆ.
