ದಾವಣಗೆರೆ: ಬಜೆಟ್ ಮಂಡನೆ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಇಂದು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆದಿದೆ.
ಮಹಾನಗರ ಪಾಲಿಕೆ ಬಜೆಟ್ ಮಂಡನೆ ಸಭೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳು ಸೇರಿದ್ದರು. ಆದರೆ ಸದಸ್ಯರು ಬೇರೆ ಬೇರೆ ವಿಚಾರವಾಗಿ ಮಾತನಾಡುತ್ತಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಮೇಯರ್ ಶೋಭಾ ಪಲ್ಲಾಗಟ್ಟೆ ಹಾಗೂ ಆಯುಕ್ತ ಮಂಜುನಾಥ್ ಬಳ್ಳಾರಿ, ಇದು ಬಜೆಟ್ ಸಭೆ. ಬಜೆಟ್ ವಿಚಾರ ಬಿಟ್ಟು ಬೇರೆ ಯಾವುದೇ ವಿಚಾರವಾಗಿ ಚರ್ಚೆ ಮಾಡುವಂತಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಆಯುಕ್ತರು ಹೇಳಿದ ಮಾತಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ವಾಗ್ದಾಳಿ ಆರಂಭಿಸಿದರು. ಈ ವೇಳೆ ಪಾಲಿಕೆಯ ಬಿಜೆಪಿ ಸದಸ್ಯ ಕುಮಾರ್, ನಗರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಹೆಸರಿಗೆ ಮಾತ್ರ ಅಧಿಕಾರ ನಡೆಸುತ್ತಿದ್ದಾರೆ ಎಂದು ಆಡಳಿತದಲ್ಲಿರುವ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
Advertisement
ಪಾಲಿಕೆ ಸದಸ್ಯ ಕುಮಾರ್ ಆರೋಪದಿಂದ ಕೋಪಗೊಂಡ ಕಾಂಗ್ರೆಸ್ ಸದಸ್ಯ ಹಾಲೇಶ್, ಸುಮ್ಮನೆ ಕೂರಯ್ಯ ಎಂದು ಗದರಿದರು. ಇಬ್ಬರ ಮಧ್ಯ ಆರಂಭವಾದ ವಾಗ್ದಾಳಿ ವೇಳೆ ಪರಸ್ಪರ ಮೇಜು ಕುಟ್ಟಿ ಆಕ್ರೋಶ ಹೊರ ಹಾಕುವರೆಗೂ ನಡೆಯಿತು. ಕೆಲ ಸದಸ್ಯರು ಕುಮಾರ್ ಹಾಗೂ ಹಾಲೇಶ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement
ಸದಸ್ಯರ ವಾಗ್ದಾಳಿಯಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಪಾಲಿಕೆ ಸಭೆಯು ಗದ್ದಲದ ಮನೆಯಾಗಿತ್ತು. ಜನರ ದುಡ್ಡಿನಲ್ಲಿ ಪಾಲಿಕೆ ಬಜೆಟ್ ಸಭೆ ನಡೆಸಿ ಅಭಿವೃದ್ಧಿ ಮಾಡುವ ಬದಲು ಪರಸ್ಪರ ಜಗಳವಾಡುತ್ತಿದ್ದಾರೆ. ಹೀಗೆ ಮಾಡಿದರೆ ನಗರದ ಅಭಿವೃದ್ಧಿ ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸಿ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv