ಬೆಂಗಳೂರು: ಒಗ್ಗಟ್ಟಿನ ಪ್ರದರ್ಶನಕ್ಕೆ ರೆಸಾರ್ಟ್ ಗೆ ಹೋಗಿದ್ದ ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ ನಡೆದಿದ್ದು, ಪರಸ್ಪರ ಇಬ್ಬರು ಬಡಿದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ನಡುವೆ ಮಾರಾಮಾರಿ ನಡೆದಿದ್ದು, ಬೆಳಗಿನ ಜಾವ ಸುಮಾರು ಮೂರು ಗಂಟೆ ಈ ಗಲಾಟೆ ನಡೆದಿದೆ. ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಶನಿವಾರ ರಾತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‍ಪಿ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ.
Advertisement
Advertisement
ಇಂದು ಬೆಳಗಿನ ಜಾವದವರೆಗೂ ಪಾರ್ಟಿ ನಡೆದಿದೆ. ಅಷ್ಟೇ ಅಲ್ಲದೇ ಇಂದು ವೇಣುಗೋಪಾಲ್ ಜೊತೆ ಪ್ರತ್ಯೇಕ ಸಭೆ ಹಿನ್ನೆಲೆಯಲ್ಲಿ ರೆಸಾರ್ಟ್ ನಲ್ಲಿ ತಂಗಿದ್ದರು. ಆದರೆ ಪಾರ್ಟಿ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದ್ದು, ಗಲಾಟೆಯಲ್ಲಿ ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಗಲಾಟೆಗೆ ಕಾರಣ?
ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ತೆಕ್ಕೆಗೆ ಸೇರಲು ಮುಂದಾಗಿದ್ದ ಗಣೇಶ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಮತ್ತು ಕಾಂಗ್ರೆಸ್ ಹೈಕಮಾಂಡ್‍ಗೆ ಆನಂದ್ ಸಿಂಗ್ ಮಾಹಿತಿ ನೀಡಿದ್ದರು. ಆನಂದ್ ಸಿಂಗ್ ನೀಡುತ್ತಿದ್ದ ಮಾಹಿತಿ ಆಧಾರದ ಮೇಲೆಯೇ ಗಣೇಶ್ ರನ್ನ ಕಾಂಗ್ರೆಸ್ ನಾಯಕರುಗಳು ಬೆನ್ನುಹತ್ತಿದ್ದರು. ಈಗ ಸಿಎಲ್‍ಪಿ ಸಭೆಯಲ್ಲಿ ಭಾಗವಹಿಸಿ ವಾಪಾಸ್ ಹೋಗಲು ಗಣೇಶ್ ಬಂದಿದ್ದರು. ಆದರೆ ಅನಿವಾರ್ಯವಾಗಿ ರೆಸಾರ್ಟ್ ನಲ್ಲಿ ಇರಬೇಕಾಯಿತು ಎಂದು ತಿಳಿದು ಬಂದಿದೆ.
Advertisement
ಇದಕ್ಕೂ ಮುನ್ನ ತಮ್ಮ ಕಾರ್ಯತಂತ್ರದ ಬಗ್ಗೆ, ಆಪರೇಷನ್ ಕಮಲದ ಬಗ್ಗೆ ಆನಂದ್ ಸಿಂಗ್ ಬಳಿ ಗಣೇಶ್ ಹೇಳಿಕೊಂಡಿದ್ದರು. ಗಣೇಶ್ ನೀಡಿದ್ದ ಮಾಹಿತಿಯನ್ನ ಯಥಾವತ್ತಾಗಿ ಕಾಂಗ್ರೆಸ್ ನಾಯಕರಿಗೆ ಆನಂದ್ ಸಿಂಗ್ ತಲುಪಿಸಿದ್ದರು. ಆನಂದ್ ಸಿಂಗ್‍ರಿಂದಾಗಿ ಅನಿವಾರ್ಯವಾಗಿ ಇಲ್ಲೇ ಉಳಿಯಬೇಕಾಯಿತು ಎಂದು ಗಣೇಶ್ ಕೋಪಗೊಂಡಿದ್ದರು. ಇದೇ ವಿಚಾರವಾಗಿ ನಾಲ್ಕು ದಿನದ ಹಿಂದೆ ಫೋನ್ ನಲ್ಲಿ ಶಾಸಕರುಗಳು ಬೈದಾಡಿಕೊಂಡಿದ್ದರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ರಾತ್ರಿ ಪಾರ್ಟಿ ಮಾಡುತ್ತ ಬಳ್ಳಾರಿ ಶಾಸಕರುಗಳು ಕುಳಿತ್ತಿದ್ದರು. ಇದೇ ವಿಚಾರವಾಗಿ ಎಣ್ಣೆ ಏಟಿನಲ್ಲಿ ಶಾಸಕ ಗಣೇಶ್ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv