ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲ ದಿನಗಳ ಹಿಂದೆ ಕೋಮುಗಲಭೆಯಾಗಿದ್ದ ಕಲ್ಲಡ್ಕದಲ್ಲಿ ಜೂನ್ 16 ವರೆಗೆ ನಿಷೇಧಾಜ್ಞೆ ಹಾಕಲಾಗಿತ್ತು. ಆದರೂ ಮಂಗಳವಾರದಂದು ಎರಡು ಯುವಕರ ನಡುವಿನ ಘರ್ಷಣೆ ಕೋಮುಗಲಭೆಗೆ ತಿರುಗಿದೆ.
ಸಂಜೆ ವೇಳೆಗೆ ರತ್ನಾಕರ್ ಹಾಗೂ ಕಲೀಲ್ ಎಂಬವರ ನಡುವೆ ಮಾತಿನ ಚಕಮಕಿ ನಡೆದು ರತ್ನಾಕರ್‍ಗೆ ಚೂರಿಯಿಂದ ಇರಿಯಲಾಗಿತ್ತು. ಇದರಿಂದ ಎರಡೂ ಗುಂಪಗಳ ಯುವಕರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಪೊಲೀಸರ ಎದುರೇ ಉಭಯ ಬಣಗಳು ಕಲ್ಲು ತೂರಾಟ ನಡೆಸಿದೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘರ್ಷಣೆಯಲ್ಲಿ ಎರಡೂ ಗುಂಪಿನ ಯುವಕರು ಸೇರಿದಂತೆ ಪೊಲೀಸರಿಗೂ ಗಾಯಗಳಾಗಿದ್ದು ಗಾಯಾಳುಗಳನ್ನು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 22 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಇಂದು ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
Advertisement
ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಲಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಭದ್ರತೆಯ ಸಲುವಾಗಿ 6 ಕೆಎಸ್‍ಆರ್‍ಪಿ, 4 ಡಿಎಆರ್ ತುಕಡಿಗಳನ್ನು ಕಲ್ಲಡ್ಕದಲ್ಲಿ ನಿಯೋಜಿಸಲಾಗಿದೆ.