ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯದ ಕುರಿತಾಗಿ ಇಂದು ಮಧ್ಯಾಹ್ನ ಕೇಂದ್ರ ಸಚಿವ ರಾಜನಾಥ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಗೊಂದಲವನ್ನು ಸೃಷ್ಟಿಸಿತ್ತು.
ಮಾಜಿ ಪ್ರಧಾನಿಗಳ ಆರೋಗ್ಯ ವಿಚಾರಿಸಿ ಬಂದ ರಾಜನಾಥ್ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬಿಜೆಪಿಗಾಗಿ ಶ್ರಮಿಸಿದ್ದ ಹಿರಿಯ ನಾಯಕ, ನಮ್ಮ ಪಕ್ಷದ ಆಧಾರ ಸ್ತಂಭವಾಗಿದ್ದ ವ್ಯಕ್ತಿ ನಮ್ಮೊಂದಿಗೆ ಇಲ್ಲ. ಅವರ ಆತ್ಮಕ್ಕೆ ನಾನು ಶ್ರದ್ಧಾಂಜಲಿ ಕೋರುತ್ತೇನೆ ಅಂತಾ ಹೇಳಿದ್ದರು.
Advertisement
ಆಗಸ್ಟ್ 14ರಂದು ಛತ್ತೀಸ್ ಗಢ ರಾಜ್ಯಪಾಲರಾದ ಬಲರಾಮಜೀ ದಾಸ್ ಟಂಡನ್ ವಿಧಿವಶರಾಗಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ರಾಜನಾಥ್ ಸಿಂಗ್ ಮಾತನಾಡುತ್ತಾ ಹಿರಿಯ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದರು. 1927ರಲ್ಲಿ ಪಂಜಾಬ್ ರಾಜ್ಯದ ಅಮೃತಸರ್ ನಲ್ಲಿ ಜನಿಸಿದ್ದ ಬಲರಾಮಜೀ ತಮ್ಮ 16ನೇ ವಯಸ್ಸಿನಲ್ಲಿಯೇ ಆರ್‍ಎಸ್‍ಎಸ್ ಸೇರ್ಪಡೆಗೊಂಡಿದ್ದರು. 1953ರಲ್ಲಿ ರಾಜಕೀಯ ಪ್ರವೇಶಿಸಿದ್ದ ಬಲರಾಮಜೀ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 1995ರಲ್ಲಿ ಪಂಜಾಬ್‍ನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
Advertisement
ವಾಜಪೇಯಿ ಅವರ ಆರೋಗ್ಯದಲ್ಲಿ ಬುಧವಾರ ಮತ್ತೆ ಏರುಪೇರಾಗಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ಏಮ್ಸ್ ಆಸ್ಪತ್ರೆ ಪ್ರಕಟಿಸಿತ್ತು. ಆದ್ರೆ ಇಂದು ಮತ್ತೆ ಅವರ ಸ್ಥಿತಿ ಗಂಭೀರವಾಗಿದ್ದು, ಗಣ್ಯಾತೀಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿತ್ತು. ಮಾಜಿ ಪ್ರಧಾನಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಪ್ರದೇಶದಲ್ಲಿ ನಡೆಯುವ ಬಿಜೆಪಿಯ ಎಲ್ಲಾ ಚುನಾವಣಾ ಯಾತ್ರೆಗಳನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಇಂದಿನ ಎಲ್ಲಾ ಬಿಜೆಪಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರಧಾನಿ ಕಾರ್ಯಾಲಯ ಕೂಡ ಪ್ರಕಟಣೆ ಹೊರಡಿಸಿತ್ತು.
Advertisement
ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರು ಶೀಘ್ರವೇ ಆಸ್ಪತ್ರೆಗೆ ಬರುವಂತೆ ಏಮ್ಸ್ ಸೂಚನೆ ನೀಡಿತ್ತು. ಈಗಾಗಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಜೆ.ಪಿ ನಡ್ವಾ, ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.
Advertisement
ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಹರಿದುಬರುತ್ತಿದೆ. ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿರುವ, ಈ ಹಿನ್ನೆಲೆಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಅಜಾತಶತ್ರು ವಾಜಪೇಯಿ ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ನಿಟ್ಟುವಳ್ಳಿ ಆಂಜನೇಯ ದೇವಸ್ಥಾನದಲ್ಲಿ ಈ ವಿಶೇಷ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಚಿತ್ರದುರ್ಗ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸುತ್ತಿದ್ದಾರೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ ಹಾಗೂ ಕಾರ್ಯಕರ್ತರಿಂದ ಈ ಪೂಜೆ ನಡೆಯುತ್ತಿದೆ. ಅಜಾತಶತ್ರು ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಚೇತರಿಕೆ ಕಾಣಲಿ. ಆರೋಗ್ಯವಾಗಿ ಗುಣಮುಖರಾಗಲಿ ಅಂತ ಪೂಜೆ ಸಲ್ಲಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv