ನವದೆಹಲಿ: ಸಹೋದ್ಯೋಗಿ ನ್ಯಾಯಮೂರ್ತಿಗಳೇ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ದೀಪಕ್ ಮಿಶ್ರಾ ವಿರುದ್ಧ ಆರೋಪ ಮಾಡಿದ್ದರು. ಇದರ ಹಿನ್ನೆಲೆಯಲ್ಲೇ ಮುಖ್ಯ ನ್ಯಾಯಮೂರ್ತಿ ಪದಚ್ಯುತಿಗೆ ಪ್ರತಿಪಕ್ಷಗಳು ಸಭಾಧ್ಯಕ್ಷರುಗಳಿಗೆ ನಿಲುವಳಿ ನೋಟಿಸ್ ಮಂಡನೆಗೆ ಸೂಚಿಸಿವೆ.
ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಪದಚ್ಯುತಿ ನಿಲುವಳಿ ನೋಟಿಸ್ ನೀಡಲಾಗಿದೆ. ವೆಂಕಯ್ಯ ನಾಯ್ಡು ಅವರು ಕಾನೂನು ತಜ್ಞರ ಅಭಿಪ್ರಾಯ, ಸಲಹೆ ಸೂಚನೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement
ಭಾರತದಲ್ಲಿ ಇಲ್ಲಿಯವರೆಗೂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆದಿಲ್ಲ. ಮಹಾಭಿಯೋಗದ ಪ್ರಕ್ರಿಯೆ ಪೂರ್ಣಗೊಳ್ಳಲು 6 ತಿಂಗಳು ಬೇಕಾಗುತ್ತದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಇರುವುದು ಆರು ತಿಂಗಳು ಅಷ್ಟೆ. ಈಗಾಗಲೇ ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ 71 ಸದಸ್ಯರು ಸಹಿ ಹಾಕಿದ್ದು, ವೆಂಕಯ್ಯನಾಯ್ಡು ಅವರಿಗೆ ಕಳುಹಿಸಿಕೊಡಲಾಗಿದೆ.
Advertisement
ಪದಚ್ಯುತಿ ನಿಲುವಳಿ ನೋಟಿಸ್ ಮುಂಬರುವ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಬದ್ಧವಾಗಿ ನಡೆದುಕೊಳ್ಳುವಂತೆ ಒಂದು ಎಚ್ಚರಿಕೆ ಇದ್ದಹಾಗೆ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದಾರೆ.
Advertisement
ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?
ಲೋಕಸಭೆಯ ಕನಿಷ್ಠ 100 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸ್ಪೀಕರ್ ಗೆ ಸಲ್ಲಿಸಬೇಕು. ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿ ಹಾಕಿ ಸಭಾಧ್ಯಕ್ಷರಿಗೆ ಸಲ್ಲಿಸಬೇಕು.
Advertisement
ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರು ಪರಸ್ಪರ ಚರ್ಚೆ ನಡೆಸಿ, ನೋಟಿಸ್ ನಲ್ಲಿ ನೀಡಿರುವ ಅಂಶಗಳು ಚರ್ಚೆಗೆ ಅರ್ಹವೆ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ಬಳಿಕ ಉಭಯ ಸಭಾಧ್ಯಕ್ಷರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಮನ್ನಣೆ ನೀಡಬೇಕೇ ಅಥವಾ ನೋಟಿಸ್ ಅನ್ನು ನಿರಾಕರಿಸಬೇಕೆ ಎನ್ನುವುದನ್ನು ನಿರ್ಧಾರ ಮಾಡುತ್ತಾರೆ. ಮನ್ನಣೆ ಕೊಡಬೇಕು ಅಂತ ಅನ್ನಿಸಿದಲ್ಲಿ, ಆರೋಪದ ಬಗ್ಗೆ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ.
ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು ಮತ್ತು ವಿಶೇಷ ನ್ಯಾಯವಾದಿ ಇರುತ್ತಾರೆ. ಸಮಿತಿ ಸದಸ್ಯರು ಆರೋಪಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಪಟ್ಟಿ ತಯಾರು ಮಾಡುತ್ತಾರೆ. ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿತ ಸಿಜೆಐಗೆ ಕಳುಹಿಸುತ್ತಾರೆ. ಆರೋಪಗಳಿಗೆ ಉತ್ತರ ನೀಡಲು ಸಿಜೆಐ ಅವರಿಗೆ ಕಾಲಾವಾಕಾಶ ನೀಡುತ್ತಾರೆ.
ಸಿಜೆಐ ವಿರುದ್ಧ ಆರೋಪಗಳು, ಸಿಜೆಐ ನೀಡಿದ ಲಿಖಿತ ಉತ್ತರದ ಆಧಾರದ ಮೇರೆಗೆ ಸಮಿತಿ ತನ್ನ ವರದಿ ಸಿದ್ಧಪಡಿಸಿ ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ನೀಡುತ್ತದೆ. ವರದಿಯನ್ನು ಸಂಬಂಧಪಟ್ಟ ಸಂಸತ್ ಸದನದಲ್ಲಿ ಮಂಡಿಸುತ್ತಾರೆ.
ಸಮಿತಿಯ ವರದಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದಲ್ಲಿ ಅಥವಾ ಮುಖ್ಯ ನ್ಯಾಯಾಧೀಶರ ಕರ್ತವ್ಯದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧ ಪಟ್ಟ ಸಂಸತ್ ಸದನದಲ್ಲಿ ವರದಿ ಕುರಿತು ಚರ್ಚೆ ನಡೆಸುತ್ತಾರೆ.
ಸಂಸತ್ ಸಭೆಯಲ್ಲಿ ಸಿಜೆಐ ಪದಚ್ಯುತಿಗೊಳಿಸುವ ನಿರ್ಣಯಕ್ಕೆ ಬಹುಮತ ಲಭಿಸಿದ್ದೇ ಆದರೆ ಮತ್ತೊಂದು ಸದನದ ಅನುಮೋದನೆಗಾಗಿ ನಿರ್ಣಯವನ್ನು ರವಾನೆ ಮಾಡಲಾಗುತ್ತದೆ.
ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕಾರವಾದರೆ, ಬಳಿಕ ನಿರ್ಣಯವನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಆದೇಶದ ನಂತರವಷ್ಟೇ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಅವರ ಸೇವೆಯಿಂದ ವಜಾಗೊಳಿಸಬಹುದಾಗಿದೆ.