ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಡಾ. ಸಿ.ಜೆ. ರಾಯ್ (CJ Roy) ಪಿಸ್ತೂಲಿನಿಂದ ಶೂಟ್ ಮಾಡಿದ್ರೂ ಯಾರಿಗೂ ಗೊತ್ತಾಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿರುವ ತಮ್ಮ ಕೊಠಡಿಯಲ್ಲೇ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೂಟ್ ಮಾಡಿಕೊಂಡಿದ್ದರೂ ಕಚೇರಿಯ ಸಿಬ್ಬಂದಿ ಸೇರಿದಂತೆ 20 ನಿಮಿಷ ಯಾರಿಗೂ ಗೊತ್ತಾಗಿರಲಿಲ್ಲ. ಪಿಸ್ತೂಲಿನಿಂದ ಬುಲೆಟ್ ಫೈರ್ ಆದ ಕೂಡಲೇ ಒಂದು ಶಬ್ಧ ಕೇಳುತ್ತದೆ. ಈ ಶಬ್ಧವೂ ಯಾರಿಗೆ ಯಾಕೆ ಕೇಳಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.
ಕೊಠಡಿಯಿಂದ ಶಬ್ಧ ಕೇಳದೇ ಇರಲು ಕಾರಣ ಇದೆ. ರಾಯ್ ಚೇಂಬರ್ ಸೌಂಡ್ ಪ್ರೂಫ್ ಆಗಿತ್ತು. ರಾಯ್ ಕೂರುತ್ತಿದ್ದ ಕೊಠಡಿಯಲ್ಲಿ ಯಾರೇ ಮಾತನಾಡಿದರೂ ಧ್ವನಿ ಹೊರಗಡೆ ಕೇಳುತ್ತಿರಲಿಲ್ಲ. ಧ್ವನಿ ಹೊರಗೆ ಹೋಗದಂತೆ ಇಂಟೀರಿಯರ್ ಮಾಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡು 20 ನಿಮಿಷ ಆಗಿದ್ದರೂ ಯಾರಿಗೂ ತಿಳಿದಿರಲಿಲ್ಲ.
ಕೊಠಡಿ ಒಳಗೆ ಹೋಗಿ 20 ನಿಮಿಷವಾದರೂ ಹೊರಗಡೆ ಬಾರದ ಕಾರಣ ಸಿಬ್ಬಂದಿ ರಾಯ್ ಅವರನ್ನು ಕರೆದಿದ್ದಾರೆ. ಸಾಕಷ್ಟೂ ಬಾರಿ ಕರೆದರೂ ಒಳಗಡೆಯಿಂದ ಧ್ವನಿ ಬಾರದ ಕಾರಣ ಅನುಮಾನ ಬಂದು ಮನೆಯವರ ಅನುಮತಿ ಪಡೆದ ಬಳಿಕ ಭದ್ರತಾ ಸಿಬ್ಬಂದಿ ಕೊಠಡಿಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿದ್ದರು. ಪ್ರವೇಶಿಸಿ ನೋಡಿದಾಗ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಂತರ ರಾಯ್ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಲ್ಜಿಯಂ ಪಿಸ್ತೂಲ್‌ನಿಂದ ಸಿ.ಜೆ ರಾಯ್ ಶೂಟೌಟ್
ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಆತ್ಮಹತ್ಯೆಗೆ ಶರಣಾಗುವ ಮೊದಲು ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರು. ಜ.30 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿಕೆ ನೀಡಲು ರಾಯ್ ಮತ್ತು ಕಾನ್ಫಿಡೆಂಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿಎ ಜೋಸೆಫ್ ಕಚೇರಿಗೆ ಆಗಮಿಸಿದ್ದರು. ಅಲ್ಲಿಂದ ಬಂದ ಅವರು ತಮ್ಮ ತಾಯಿಯೊಂದಿಗೆ ಮಾತನಾಡಬೇಕು ಎಂದಿದ್ದರು. ತಮ್ಮ ಕ್ಯಾಬಿನ್ಗೆ ಹೋದ ರಾಯ್ ಮತ್ತೆ ವಾಪಸ್ ಬರಲೇ ಇಲ್ಲ.
ಬಹಳ ಸಮಯವಾದರೂ ಹೊರಗಡೆ ಬಾರದೇ ಇದ್ದಾಗ ಜೋಸೆಫ್ ಕ್ಯಾಬಿನ್ ಒಳಗಡೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ರಾಯ್ ಅವರ ಭದ್ರತಾ ಸಿಬ್ಬಂದಿ, ಯಾರನ್ನು ಒಳಗಡೆ ಬಿಡಬಾರದು ಎಂದು ಸರ್ ಸೂಚಿಸಿದ್ದಾರೆ ಎಂದು ಹೇಳಿ ಜೋಸೆಫ್ ಅವರನ್ನು ತಡೆದಿದ್ದಾರೆ. ನಂತರ ಜೋಸೆಫ್ ಅವರು ಬಾಗಿಲನ್ನು ಬಲವಾಗಿ ಬಡಿದಿದ್ದಾರೆ. ಆಗಲೂ ಯಾವುದೇ ಧ್ವನಿ ಹೊರಗಡೆಯಿಂದ ಬಾರದೇ ಇದ್ದಾಗ ನಂತರ ಬಲವಂತವಾಗಿ ಬಾಗಿಲನ್ನು ಒಡೆಯಲಾಗಿದೆ.
ಕೇರಳ ಮೂಲದ ರಾಯ್, 2005ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯನ್ನು ಸ್ಥಾಪಿಸಿದ್ದರು. ಈವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್ಮೆಂಟ್, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಹೊಟೇಲ್‌ಗಳು, ರೆಸಾರ್ಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ.

