ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

Public TV
2 Min Read
Rajya Sabha

– ಪರ 125, ವಿರುದ್ಧ 105 ಮತ

ನವದೆಹಲಿ: ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿದೆ. ರಾಜ್ಯ ಸಭೆಯಲ್ಲಿ ಮಸೂದೆಯ ಪರವಾಗಿ 125 ಮತ್ತು ವಿರೋಧವಾಗಿ 105 ಮತಗಳು ಬಿದ್ದವು.

ಆರಂಭದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಗೆ ಸೋಲುಂಟು ಆಯಿತು. ಆಯ್ಕೆ ಸಮಿತಿಗೆ ಕಳುಹಿಸುವಂತೆ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳ ಒತ್ತಾಯಿಸಿದ್ದವು. ಇಲ್ಲಿ ಸರ್ಕಾರದ ಪರ 124 ಮತ್ತು ವಿರೋಧವಾಗಿ 99 ಮತಗಳು ಬಿದ್ದಿದ್ದವು. ಇನ್ನು ಶಿವಸೇನೆಯ ಸಂಸದರು ಸಭಾತ್ಯಾಗ ಮಾಡುವ ಮೂಲಕ ಮತದಾನ ಬಹಿಷ್ಕರಿಸಿದರು. ಪೌರತ್ವ ತಿದ್ದುಪಡಿ ಮಸೂದೆ 311 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿತ್ತು.

ಗೃಹ ಸಚಿವ ಅಮಿತ್ ಶಾ ಅವರು ಮಧ್ಯಾಹ್ನ 2 ಗಂಟೆಗೆ ಬಿಲ್ ಮಂಡಿಸಿದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದು ಭಾರತ ಗಣರಾಜ್ಯದ ಮೇಲಿನ ಹಲ್ಲೆ. ದೇಶದ ಆತ್ಮಕ್ಕೆ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಅಂತ ಪ್ರತಿಪಾದಿಸಿದರು. ಆದರೂ ಅಮಿತ್ ಶಾ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಈ ಮಸೂದೆಯಿಂದ ಮುಸ್ಲಿಮರು ಯಾವುದೇ ಗೊಂದಲ, ಆತಂಕಕ್ಕೀಡಾಗೋದು ಬೇಡ. ಭಾರತೀಯ ಮುಸ್ಲೀಮರು ಇಂದಿಗೂ, ಎಂದೆಂದಿಗೂ ಭಾರತೀಯ ಪೌರರು ಎಂದು ಅಮಿತ್ ಆ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು. ಶಿವಸೇನೆಯ ಸಂಜಯ್ ರಾವತ್ ಮಾತನಾಡಿ, ಮಸೂದೆ ಅಡಿಯಲ್ಲಿ ಭಾರತದ ಪೌರತ್ವ ಪಡೆಯುವ ನಿರಾಶ್ರಿತರಿಗೆ ಮತದಾನದ ಹಕ್ಕು ಲಭಿಸಲಿದೆಯೇ? ಅಕ್ರಮ ಒಳನುಸುಳುಕೋರರನ್ನು ಇದರ ಮೂಲಕ ಹೊರಹಾಕಲಾಗುತ್ತದೆಯೇ? ಅಂತ ಪ್ರಶ್ನಿಸಿದರು.

ಕಾಂಗ್ರೆಸ್‍ನ ಕಪಿಲ್ ಸಿಬಲ್, ಭಾರತದ ಸಂವಿಧಾನವನ್ನು ಎರಡು ಡೈನೋಸರ್‍ಗಳ ಜುರಾಸಿಕ್‍ಪಾರ್ಕ್ ಆಗಿ ಪರಿವರ್ತಿಸಬೇಡಿ ಅಂದರು. ಸಂಸತ್‍ನಲ್ಲಿ ಮಸೂದೆ ಅಂಗೀಕಾರವಾದ್ರೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸ್ತೇವೆ ಅಂತ ಚಿದಂಬರಂ ಹೇಳಿದರು. ರಾಜ್ಯಸಭೆಯಲ್ಲಿ ಚರ್ಚೆ ಆರಂಭವಾಗುವುದಕ್ಕೂ ಮುನ್ನ ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೌರತ್ವ ಮಸೂದೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು. ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ವಲಸೆ ಹೋದ ಜನರಿಗೆ ಇದು ಶಾಶ್ವತ ಪರಿಹಾರ ನೀಡುತ್ತವೆ. ಆದ್ರೆ ವಿಪಕ್ಷದಲ್ಲಿರುವ ಕೆಲವರು ಪೌರತ್ವ ಮಸೂದೆ ಬಗ್ಗೆ ಪಾಕಿಸ್ತಾನದ ಧಾಟಿಯಲ್ಲೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *