ಪೌರತ್ವ ತಿದ್ದುಪಡಿ ಕಾಯ್ದೆ ಗೊಂದಲ ನಿವಾರಣೆಗೆ ಮುಂದಾದ ಬಿಜೆಪಿ

Public TV
3 Min Read
BJP 3

-ಬಿಜೆಪಿಯಿಂದ ಕಾರ್ಯಾಗಾರಗಳ ಆಯೋಜನೆ

ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಹಲವೆಡೆ ಹಿಂಸಾಚಾರ ಭುಗಿಲೆದ್ದು, ಕರ್ಪ್ಯೂ, ನಿಷೇಧಾಜ್ಞೆ ಜಾರಿಯಲ್ಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣದಿಂದಲೇ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸುವ, ಗೊಂದಲ ನಿವಾರಿಸುವ ಕಾರ್ಯಕ್ಕೆ ಬಿಜೆಪಿ ಕೈಹಾಕಿದೆ.

ಈ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳಲು ಮುಂದಾಗಿರುವ ರಾಜ್ಯ ಬಿಜೆಪಿ ಮೊದಲ ಭಾಗವಾಗಿ ಪಕ್ಷದ ಕಾರ್ಯಕರ್ತರಲ್ಲಿ ಅರಿವು ಮೂಡಿಸಲು ಮುಂದಾಯ್ತು. ಇವತ್ತು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪೌರತ್ವ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿವರಣೆ ನೀಡಿದರು. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳ ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಾಗಾರಾದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರ ಉದ್ದೇಶಿಸಿ ಮೊದಲಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾತಾಡಿ ಪೌರತ್ವ ಕಾಯ್ದೆ ಎಂದರೇನು, ಅದರ ಉದ್ದೇಶ, ಕಾರಣ, ಯಾಕೆ ವಿರೋಧ ಎಂಬ ವಿಚಾರಗಳ ಕುರಿತು ಅರ್ಥವತ್ತಾಗಿ ವಿವರಿಸಿದರು. ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆ ಸಂಬಂಧ ಅಲ್ಪಸಂಖ್ಯಾತರಿಗೆ ಕುಮ್ಮಕ್ಕು ಕೊಟ್ಟು, ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಭಾರತೀಯ ಜನತಾ ಪಕ್ಷದವರು ಯಾವುದೇ ತಪ್ಪು ಮಾಡಿಲ್ಲ. ಸಂವಿಧಾನ ಬದ್ಧವಾದ ಕೆಲಸವನ್ನೇ ಮಾಡಿದ್ದೇವೆ. ನಾವು ಯಾವುದೇ ಧರ್ಮವನ್ನು ಇಬ್ಭಾಗ ಮಾಡಿಲ್ಲ. ಕಿರುಕುಳ ಅನುಭವಿಸಿ ಬಂದವರಿಗೆ ಸಹಾಯ ಹಸ್ತ ಚಾಚುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಪೌರತ್ವ ಕೊಡಲು ಕಾಯ್ದೆಯಲ್ಲಿ ಮುಸ್ಲಿಮರನ್ನು ಯಾಕೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸುತ್ತಿರುವವರು ಅಂದು ಆ ಮೂರು ರಾಷ್ಟ್ರಗಳಲ್ಲಿ ಆರು ಧರ್ಮೀಯರು ಕಿರುಕುಳ ಅನುಭವಿಸುತ್ತಿದ್ದಾಗ ಯಾಕೆ ಪ್ರಶ್ನಿಸಿಲ್ಲ ಎಂದರು. ಆಗಿಲ್ಲದ ಮಾನವ ಹಕ್ಕುಗಳ ಉಲ್ಲಂಘನೆ ಈಗ ಹೇಗೆ ಆಗುತ್ತದೆ ಎಂದು ವಿಶ್ವಸಂಸ್ಥೆ ವಿರುದ್ಧ ಸಚಿವ ಮಾಧುಸ್ವಾಮಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

CAA Lucknow 2

ಪಶ್ಚಿಮ ಬಂಗಾಳದಲ್ಲಿ ಗಡಿಯೇ ಇಲ್ಲ, ಒಂದೊಂದು ಎಲೆಕ್ಷನ್ ಗೆ 10 ಲಕ್ಷ ಜನ ಬಂದು ವೋಟ್ ಹಾಕಿ ಹೋಗುತ್ತಾರೆ. ಹಾಗಾಗಿ ಅವರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಪ್ರಮುಖವಾಗಿ ಆರು ಧರ್ಮಗಳ ಜನ ಅಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ತಮ್ಮ ಮೂಲಮನೆಯನ್ನು ಹುಡುಕಿಕೊಂಡು ಬಂದಾಗ ಅವರಿಗೆ ಸ್ಟೇಟ್ ಲೆಸ್ ಪರಿಸ್ಥಿತಿ ನೀಡಬೇಕಾ? ಸರಿಯಾದ ದಾಖಲೆ ಇಲ್ಲದೇ ಈ ರೀತಿ ಬಂದಿರುವವರು ಸುಮಾರು 30,000 ಜನ ಇದ್ದಾರೆ. ಇವರಿಗೆ ಪೌರತ್ವ ಕೊಡಬೇಕು ಎಂಬುದಷ್ಟೇ ನಮ್ಮ ಇಚ್ಛೆ ಎಂದು ಇದೇ ವೇಳೆ ಸಚಿವ ಮಾಧುಸ್ವಾಮಿ ತಿಳಿಸಿದರು.

CAA 2

ಡಾ.ಸಿ.ಎನ್.ಅಶ್ವಥ ನಾರಾಯಣ:
ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಗೊಂದಲ ಮೂಡಿಸುವ ಯತ್ನಗಳು ನಡೆಯುತ್ತಿವೆ ಎಂದು ಕಾರ್ಯಾಗಾರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು. ಗೊಂದಲ ಹುಟ್ಟಿಸೋರಲ್ಲಿ ಕಾಯ್ದೆ ಕುರಿತು ಸ್ಪಷ್ಟತೆ ಮೂಡಿಸಬೇಕಿದೆ. 2014ಕ್ಕೂ ಮುಂಚೆ ವಲಸೆ ಬಂದವರಿಗಾಗಿ ಪೌರತ್ವ ಕೊಡಲು ಸಿಎಎ ಕಾಯ್ದೆ ತರಲಾಯಿತು. ಅಮೆರಿಕದ ಕಾಯ್ದೆಯಲ್ಲೂ ವಲಸಿಗ ಕ್ರೈಸ್ತರಿಗೆ ಪೌರತ್ವ ಕೊಡಲು ಆದ್ಯತೆ ಕೊಡಲಾಗಿದೆ. ಆದರೆ ನಮ್ಮಲ್ಲಿ ಆ ರೀತಿ ಮಾಡಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಗಳಲ್ಲಿ ನಡೆದ ದೌರ್ಜನ್ಯಕ್ಕೆ ಇಲ್ಲಿ ನ್ಯಾಯ ಕೊಡಲಾಗಿದೆ ಎಂದು ತಿಳಿಸಿದರು. ಈ ಕಾಯ್ದೆ ಮೂಲಕ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಲಾಗಿದೆ. ಆದರೆ ಆ ದೇಶಗಳ ಮುಸ್ಲಿಮರಿಗೂ ಪೌರತ್ವ ಕೊಡಿ ಅನ್ನುವ ಆಗ್ರಹ ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನ್ಯಾಯ? ರೋಹಿಂಗ್ಯ ಮುಸ್ಲಿಮರಿಗೆ ಚೀನಾ ಗಡಿ 400 ಕಿ.ಮೀ.ದೂರದಲ್ಲಿದೆ. ನಮ್ಮ ದೇಶದ ಗಡಿ 2,700 ಕಿ.ಮೀ ಇದೆ. ಅವರು ಚೀನಾಕ್ಕೆ ಹೋಗದೇ ನಮ್ಮ ದೇಶಕ್ಕೆ ಯಾಕೆ ಬಂದರು ಎಂದು ಪ್ರಶ್ನಿಸಿದರು.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಿಜೆಪಿಯಿಂದ ಎಲ್ಲ ಜಿಲ್ಲಾ ಮಟ್ಟದಲ್ಲೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸಲು ಸದ್ಯದಲ್ಲೇ ಕಾರ್ಯಾಗಾರಗಳನ್ನೂ ನಡೆಸಲು ನಿರ್ಧರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *