– ಸಿಐಎಸ್‍ಎಫ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ವೃದ್ಧೆ
ನವದೆಹಲಿ: 50 ಸಾವಿರ ರೂ. ಇರುವ ಬ್ಯಾಗ್ ಕಳೆದುಕೊಂಡ ಮಾಲೀಕರಿಗೆ ಮರಳಿ ತಲುಪಿಸುವ ಮೂಲಕ ಸಿಐಎಸ್‍ಎಫ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನವದೆಹಲಿಯ ಗ್ರೀನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಭದ್ರತೆ ಪರಿಶೀಲನೆ ವೇಳೆ ಹಿರಿಯ ನಾಗರಿಕರಾದ ಕಮಲ ಅವರು ಅಲ್ಲಿಯೇ ಬ್ಯಾಗ್ ಬಿಟ್ಟು ತೆರಳಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಬ್ಯಾಗ್‍ನ್ನು ಸುರಕ್ಷಿತ ಸ್ಥಳದಲ್ಲಿಟ್ಟು ನಂತರ ಮರಳಿ ನೀಡಿದ್ದಾರೆ. ಬ್ಯಾಗನ್ನು ಸುರಕ್ಷಿತವಾಗಿಟ್ಟು ಮರಳಿ ನೀಡಿದ್ದಕ್ಕೆ ಕಮಲ ಅವರು ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಭದ್ರತೆಗಾಗಿ ಬ್ಯಾಗ್ ಪರಿಶೀಲಿಸಿದ ನಂತರ ಸಿಬ್ಬಂದಿ ಬ್ಯಾಗನ್ನು ನೀಡಿದ್ದರು. ಆದರೆ ಮಾಲೀಕರು ಇದನ್ನು ಅಲ್ಲಿಯೇ ಬಿಟ್ಟು ತೆರಳಿದ್ದರು. ರಾತ್ರಿ 10.25ರ ಹೊತ್ತಿಗೆ ಮಾಲೀಕರು ಬ್ಯಾಗ್ ಬಿಟ್ಟು ಹೋಗಿರುವ ಕುರಿತು ತಿಳಿದಿದ್ದು, ಹಿಂದಿನ ದಿನ ಸಿಐಎಸ್‍ಎಫ್ ಸಿಬ್ಬಂದಿ ಬ್ಯಾಗ್ ನ್ನು ಸುರಕ್ಷಿತವಾಗಿ ಇಟ್ಟಿದ್ದರು. ಸಿಬ್ಬಂದಿ ಠಾಣೆ ನಿಯಂತ್ರಕರಿಗೆ ಬ್ಯಾಗ್ ನ್ನು ಹಸ್ತಾಂತರಿಸಿದ್ದಾರೆ. ಆಗ ಬ್ಯಾಗ್ ತೆರೆದು ನೋಡಿದ್ದು, 58,820 ರೂ. ಇರುವುದು ಪತ್ತೆಯಾಗಿತ್ತು. ಅಲ್ಲದೆ ಬ್ಯಾಗಿನಲ್ಲಿ ಹಲವು ದಾಖಲೆಗಳು ಸಹ ಇದ್ದವು. ಬ್ಯಾಗಿನಲ್ಲಿ ಸಂಪರ್ಕ ಸಂಖ್ಯೆ ಇದ್ದಿದ್ದರಿಂದ ಸಿಬ್ಬಂದಿ ಕಮಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಕಮಲ ಅವರು ಗ್ರೀನ್ ಪಾರ್ಕ್ ಮೆಟ್ರೋಗೆ ಆಗಮಿಸಿ, ಸಿಬ್ಬಂದಿಯಿಂದ ಬ್ಯಾಗ್ ಪಡೆದಿದ್ದಾರೆ. ಸಿಐಎಸ್‍ಎಫ್ ಸಿಬ್ಬಂದಿಯ ಪ್ರಾಮಾಣಿಕತೆಗೆ ಕಮಲಾ ಅವರು ಧನ್ಯವಾದ ಅರ್ಪಿಸಿದ್ದಾರೆ.