ಪ್ರತಿ ವರ್ಷವೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕು. ಆದರೆ, ಕಳೆದು ಮೂರು ವರ್ಷಗಳಿಂದ ಚುನಾವಣೆ ನಡೆಸದೇ ಮುಂದೂಡಲಾಗುತ್ತಿದೆ ಎನ್ನುವ ಆರೋಪವಿದೆ. ಕೋವಿಡ್ ಮತ್ತಿತರ ಕಾರಣಗಳನ್ನು ನೀಡುತ್ತಾ ಈಗಿರುವ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಚುನಾವಣೆಯನ್ನು ಮುಂದೂಡುತ್ತಿದ್ದಾರೆ ಎಂದು ವಾಣಿಜ್ಯ ಮಂಡಳಿಯ ಸದಸ್ಯರೇ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಕೂಡ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೂ, ಈವರೆಗೂ ಚುನಾವಣೆ ನಡೆಸಿಲ್ಲ. ಹಾಗಾಗಿ ಹಿರಿಯ ನಿರ್ಮಾಪಕರಾದ ಭಾ.ಮಾ.ಹರೀಶ್ ಮತ್ತು ಇತರ ಸದಸ್ಯರು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ಮತ್ತೊಂದು ದೂರು ಸಲ್ಲಿಸಿದ್ದರು. ಈ ಬಾರಿ ಚುನಾವಣೆ ನಡೆಸಲೇಬೇಕೆಂದು ನೋಂದಣಾಧಿಕಾರಿ ಕೊನೆಯ ನೋಟಿಸ್ ಜಾರಿ ಮಾಡಿದ್ದಾರೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ತಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್
ಪಬ್ಲಿಕ್ ಟಿವಿ ಡಿಜಿಟಲ್ ಗೆ ಈ ನೋಟಿಸ್ ಕಾಪಿ ಸಿಕ್ಕಿದ್ದು, ‘ಸಂಘ ಸಂಸ್ಥೆಗಳ ಚುನಾವಣೆ ನಡೆಸಲು ಸರಕಾರವು ಆದೇಶ ಹೊರಡಿಸಿದೆ. ಹಾಗೂ ಸಂಘದ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆ ನಡೆಸದಿರುವ ಬಗ್ಗೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದ್ದರಿಂದ ಕೂಡಲೇ ಚುನಾವಣಾ ದಿನಾಂಕವನ್ನು ನಿಗಧಿಪಡಿಸಬೇಕು. ತಪ್ಪಿದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎನ್ನುವ ನೋಟಿಸ್ ಅನ್ನು ಸಂಘಗಳ ಜಿಲ್ಲಾ ನೋಂದಣಾಧಿಕಾರಿ, 4ನೇ ವಲಯ, ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ ಎಸ್.ಜಿ.ಮಂಜುನಾಥ್ ಸಿಂಗ್ ಹೊರಡಿಸಿದ್ದಾರೆ. ಇದನ್ನೂ ಓದಿ : ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ
Advertisement
ಅಂದುಕೊಂಡಂತೆ ಆಗಿದ್ದರೆ, ಇದೇ ಫೆ.16 ರಂದು ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ಕೋವಿಡ್ ಕಾರಣದಿಂದ ಸರಕಾರವೇ ಚುನಾವಣೆ ಮುಂದೂಡಿತ್ತು. ಇದೀಗ ಅದು ತೆರವುಗೊಂಡಿದೆ. ಆದರೂ, ಚುನಾವಣೆಯ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಮತ್ತೆ ಚುನಾವಣೆಯನ್ನು ಮುಂದೂಡುವ ತಂತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯುತ್ತಿದೆ ಎನ್ನುವ ಕಾರಣಕ್ಕಾಗಿ 50ಕ್ಕೂ ಹೆಚ್ಚು ಸದಸ್ಯರು ದೂರು ಸಲ್ಲಿಸಿದ್ದರು. ಇದೀಗ ನೋಟಿಸ್ ಪಡೆದಿರುವ ವಾಣಿಜ್ಯ ಮಂಡಳಿಯು ಚುನಾವಣೆ ನಡೆಸತ್ತಾ ಅಥವಾ ಮುಂದೂಡುತ್ತಾ ಎಂದು ಕಾದು ನೋಡಬೇಕು.